ಒತ್ತುವರಿ ತೆರವಿಗೆ ಕೊಡವ ಭಾಷಿಕ ಸಮುದಾಯಗಳ ಕೂಟ ಒತ್ತಾಯ

15/05/2020

ಮಡಿಕೇರಿ ಮೇ 15 : ಕೊಡಗಿನಲ್ಲಿ ಕೊಡವ ಜನಾಂಗ ಸೇರಿದಂತೆ, ಕೊಡವ ಭಾಷೆ ಮಾತನಾಡುವ 20 ಸಮುದಾಯಗಳು ಒಂದೆಡೆ ಸೇರಿ ಸೌಹಾರ್ಧ ಬದುಕನ್ನು ನಡೆಸುವಲ್ಲಿ ಸಹಕಾರಿಯಾದ ನಾಡಿನ ಜಮ್ಮಾ, ಉಂಬಳಿ, ಊರುಪರಂಬು, ದೇವಪರಂಬು, ನಾಡ್‍ಮಂದ್ ಸೇರಿದಂತೆ ಗೋಮಾಳ ಜಾಗಗಳ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಯಥಾಸ್ಥಿತಿ ಕಾಪಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡವ ಭಾಷಿಕ ಸಮುದಾಯಗಳ ಕೂಟ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದೆ.
ಈ ಸಂದರ್ಭ ಮಾತನಾಡಿದ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ, ಜಿಲ್ಲೆಯಾದ್ಯಂತ ನೆಲೆಕಂಡಿರುವ ಮಂದ್-ಪರಂಬು, ಗೋಮಾಳ, ಕೆರೆಗಳ, ಒತ್ತುವರಿಯನ್ನು ತೆರವುಗೊಳಿಸಿ, ಜಾಗದ ವಾಸ್ತವಾಂಶವನ್ನು ಗುರುತಿಸಲು ಪೂರ್ಣ ಪ್ರಮಾಣದ ತಜ್ಞರ ಸಮಿತಿ ಮತ್ತು ಸತ್ಯಶೋಧನಾ ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸಿದರು.
ಕೊಡಗು ಜಿಲ್ಲೆ ವೀರಕಲಿಗಳ ನಾಡು, ಜೀವನದಿ ಕಾವೇರಿಯ ಉಗಮಸ್ಥಾನ, ವಿವಿಧ ಜನಾಂಗ, ಭಾಷೆ, ಸಾಹಿತ್ಯ, ಸಂಸ್ಕøತಿ, ಕಲೆ ಸಂಪ್ರದಾಯಗಳು, ವಿಶೇಷ ಆಚರಣೆಯ ನೆಲೆವೀಡು. ಕೊಡವ ಭಾಷೆ, ಸಾಹಿತ್ಯ ಸಂಸ್ಕøತಿ, ಸಂಪ್ರದಾಯಗಳಿಂದ ಕಂಗೊಳಿಸುವ ಜಿಲ್ಲೆ. ಇಂತಹ ಜಿಲ್ಲೆಯ ಪ್ರಕೃತಿಮಯ ಕಲೆ ಸಂಪತ್ತಿನ ಲಾಲನೆ, ಪಾಲನೆ, ಪೋಷಣೆ ಬಗ್ಗೆ ನಾಡಿನ ಕೊಡವರು ಸೇರಿದಂತೆ ಕೊಡವ ಭಾಷಿಕ ಮೂಲ ನಿವಾಸಿಗಳಿಗೆ ಹೆಮ್ಮೆಯ ವಿಚಾರ.
ಪೂರ್ವ ಕಾಲದಿಂದಲೂ ಅಭಿಭಕ್ತ ಕುಟುಂಬದ ಹಿನ್ನಲೆಯಾದ ಐನ್‍ಮನೆ, ಮುಂದ್‍ಮನೆ, ಕೈಮಡಗಳು, ನಾಡ್-ಊರ್ ಮಂದ್‍ಗಳು, ಊರುಪರಂಬು, ದೇವಕೆರೆಗಳು, ಸೇರಿದಂತೆ ಗೋಮಾಳ ಪ್ರದೇಶ ತನ್ನದೇಯಾದ ವಿಶಿಷ್ಟ ಸಂಸ್ಕøತಿ ಸಂಪ್ರದಾಯ, ಧಾರ್ಮಿಕ ಆಚರಣೆಯ ನೆಲೆಗಟ್ಟಿನಲ್ಲಿ ಅಸ್ತಿತ್ವದಲ್ಲಿರುವುದು ಇತಿಹಾಸ ಪುಟುಗಳಿಂದ ತಿಳಿದು ಬರುತ್ತದೆ.
ಕಾಲಘಟ್ಟ ಉರುಳಿದಂತೆ, ನಾಡಿನಲ್ಲಿ ಇತರೆಡೆಗಳಿಂದ ಆಗಮಿಸಿ ನೆಲೆಕಂಡುಕೊಳ್ಳುವ ದೃಷ್ಟಿಯಿಂದ, ಕೆಲವೊಂದು ಇಲಾಖಾಧಿಕಾರಿಗಳ ಕಾಣದ ಕೈಗಳ ಮುಖಾಂತರ ಬೇಜವಾಬ್ದಾರಿತನದಿಂದ ಸಂಸ್ಕøತಿಯ ತಾಣವಾದ ನಾಡಿನ ಎಕರೆಗಟ್ಟಲೆ ಜಾಗವನ್ನು, ಗೋಮಾಳ ಪ್ರದೇಶವನ್ನು ಅಕ್ರಮವಾಗಿ ನೀಡುತ್ತಿರುವುದು ಕಂಡು ಬರುತ್ತಿದೆ. ಇದರಿಂದ ನಾಡಿನ ನೈಜ ಮೂಲನಿವಾಸಿ ಜನಾಂಗದವರ ಒಗ್ಗಟ್ಟಿಗೆ, ಧಾರ್ಮಿಕ ಆಚರಣೆಗೆ ಅಡಚಣೆಯಾಗುತ್ತಿದ್ದು, ನಾಡಿನಲ್ಲಿ ಸ್ವಚ್ಛಂದ ಬದುಕುದಾರರ ವಾತಾವರಣವನ್ನೇ ಅನ್ಯರು ಕಬಳಿಸುತ್ತಿರುವುದು ವಿಷಾದಕರ ಬೆಳೆವಣಿಗೆಯಾಗಿದೆ ಎಂದು ಡಾ.ಮೇಚಿರ ಸುಭಾಷ್ ನಾಣಯ್ಯ ತಿಳಿಸಿದರು.
ಅಂದಿನ ಕಾಲದಲ್ಲಿ ರಾಜವಂಶಸ್ಥರು, ನಾಡಿನ ಮೂಲನಿವಾಸಿ ಜನಾಂಗದವರ ಬದುಕಿನ ವೈಶಾಲ್ಯತೆಯನ್ನು ಪರಿಗಣಿಸಿ, ಉಂಬಳಿಯಾಗಿ ನೀಡಿದ ಜಾಗವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಳ್ಳುವಲ್ಲಿ, ಪೀಳಿಗೆಯ ಮಕ್ಕಳಿಗೆ ದಾರಿದೀಪವಾಗಲು ಎಚ್ಚರ ವಹಿಸಬೇಕಾದ ಅನಿವಾರ್ಯತೆಯಿದೆ. ಆದ್ದರಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ, ಸಹ ಕಾರ್ಯದರ್ಶಿ ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಖಜಾಂಚಿ ಪಡಿಞರಂಡ ಪ್ರಭುಕುಮಾರ್, ನಿರ್ದೇಶಕರುಗಳಾದ ಕುಡಿಯರ ಮುತ್ತಪ್ಪ, ತೋರೆರ ಕಾಶಿ ಕಾರ್ಯಪ್ಪ, ಪೊನ್ನಜ್ಜೀರ ಕಿಶು ಭರತ್ ಹಾಗೂ ಕೋಲೆಯೆಂಡ ಯು. ಗಿರೀಶ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.