ಕೊಡಗು ನೃತ್ಯ ಕಲಾ ಶಾಲೆಗಳಿಗೆ ನೆರವು ನೀಡಲು ಮನವಿ

May 15, 2020

ಮಡಿಕೇರಿ ಮೇ 15 : ಕೊರೋನಾ ಲಾಕ್‍ಡೌನ್ ನಿಂದಾಗಿ ನೃತ್ಯ ಕಲಾ ಶಾಲೆಗಳ ನಿರ್ವಾಹಕರುಗಳು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಕೊಡಗು ಜಿಲ್ಲಾ ನೃತ್ಯ ಕಲಾ ಶಾಲೆಗಳ ನಿರ್ವಾಹಕರುಗಳು ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅರ್ಪಿತ್ ಅನೂಪ್ ಡಿಸೋಜ, ಮಳೆಹಾನಿ ಸಂಕಷ್ಟದ ನಡುವೆ ಆರ್ಥಿಕ ಸಮಸ್ಯೆಯಿಂದ ಚೇತರಿಸಿಕೊಳ್ಳುವ ಸಂದರ್ಭದಲ್ಲೇ ಕೊರೋನಾ ಲಾಕ್‍ಡೌನ್ ನಿಂದಾಗಿ ಜಿಲ್ಲೆಯ ಎಲ್ಲಾ ನೃತ್ಯ ಶಾಲೆಗಳು ಮುಚ್ಚಲ್ಪಟ್ಟಿವೆ. ಇದರಿಂದಾಗಿ ಆದಾಯ ಮೂಲವಿಲ್ಲದೆ ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ಸುಮಾರು 25ಕ್ಕೂ ಹೆಚ್ಚು ನೃತ್ಯ ಸಂಸ್ಥೆಗಳಿದ್ದು, ಮಕ್ಕಳಲ್ಲಿ ಅಡಗಿರುವ ಕಲೆ, ಪ್ರತಿಭೆ, ಅಭಿರುಚಿಯನ್ನು ಹೊರಹಾಕಲು ನೃತ್ಯ ಕಲಾ ಶಾಲೆಗಳು ಸಹಕಾರಿಯಾಗಿವೆ. ಆದರೆ ಕಳೆದೆರಡು ವರ್ಷಗಳಿಂದ ಕೊಡಗಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಿಂದಾಗಿ ಸಾಂಸ್ಕøತಿಕ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಅಲ್ಲದೇ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಅತೀ ಕಡಿಮೆ ಸಂಭಾವನೆ ದೊರೆಯುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ನೃತ್ಯ ತರಗತಿಯ ಮಾಸಿಕ ಶುಲ್ಕವನ್ನೇ ನಂಬಿರುವ ನೃತ್ಯ ಸಂಸ್ಥೆಗಳು ಯಾವುದೇ ಕೆಲಸ ಕಾರ್ಯವಿಲ್ಲದೇ ಬ್ಯಾಂಕ್‍ಗಳ ಸಾಲ ಮರುಪಾವತಿ ಮಾಡುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿವೆ. ಆದ್ದರಿಂದ ನೃತ್ಯ ಸಂಸ್ಥೆಗಳ ಮಾಲೀಕರು ಹಾಗೂ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಆರ್ಥಿಕ ಹಿನ್ನಡೆಯನ್ನು ಪರಿಗಣಿಸಿ ಸರ್ಕಾರದ ವತಿಯಿಂದ ಸಿಗಬಹುದಾದ ಸೌಲಭ್ಯಗಳನ್ನು ಮತ್ತು ಜೀವನ ನಿರ್ವಹಣೆಗೆ ಆರ್ಥಿಕ ನೆರವನ್ನು ನೀಡಬೇಕೆಂದು ಅರ್ಪಿತ್ ಅನೂಪ್ ಡಿಸೋಜ ಮನವಿ ಮಾಡಿದರು.
ಬಹುತೇಕ ಇತರ ಎಲ್ಲಾ ಕ್ಷೇತ್ರಗಳ ಶ್ರಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಣೆಯ ಮೂಲಕ ಸರ್ಕಾರ ನೆರವಿಗೆ ಬಂದಿದೆ. ಇದೇ ಪ್ರಕಾರವಾಗಿ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ನೃತ್ಯ ಕಲಾ ಶಾಲೆಗಳಿಗೂ ಸಹಾಯ ಮಾಡಬೇಕೆಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ನೃತ್ಯ ಶಾಲೆಗಳ ಪ್ರಮುಖರಾದ ಏಂಜಲ್ ರಶ್ಮಿ ಡಿಸೋಜ, ಅಭಿಷೇಕ್, ಕೆ.ಎಂ.ಪ್ರದೀಪ್, ಅಶ್ವೀನ್ ಡಿಸೋಜ ಹಾಗೂ ಪಿ.ಎನ್.ದಿನೇಶ್ ಉಪಸ್ಥಿತರಿದ್ದರು.

 

 

 

error: Content is protected !!