ಪೂಜೆ ಮತ್ತು ಪ್ರಾರ್ಥನೆಗೆ ಅವಕಾಶ : ಕೊಡಗು ಧಾರ್ಮಿಕ ಮುಖಂಡರುಗಳಿಂದ ಡಿಸಿಗೆ ಮನವಿ

ಮಡಿಕೇರಿ ಮೇ 15 : ಕೊರೋನಾ ಲಾಕ್ ಡೌನ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮನುಷ್ಯನ ಮಾನಸಿಕ ಸ್ಥೈರ್ಯವನ್ನು, ಶಾಂತಿ, ನೆಮ್ಮದಿಯನ್ನು ಹೆಚ್ಚಿಸಲು ಸಹಕಾರಿಯಾಗಬಲ್ಲ ಧಾರ್ಮಿಕ ಕೇಂದ್ರಗಳ ಬಾಗಿಲನ್ನು ತೆರೆದು ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲು ಷರತ್ತುಬದ್ಧವಾಗಿ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲೆಯ ವಿವಿಧ ಧಾರ್ಮಿಕ ಮುಖಂಡರುಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕೊರೋನಾ ಸೋಂಕು ಲಾಕ್ಡೌನ್ ನಿಂದ ದೇಶದ ಜನ ಸಂಕಷ್ಟದಲ್ಲಿದ್ದು, ವೈದ್ಯಲೋಕ ತನ್ನೆಲ್ಲಾ ಪ್ರಯತ್ನಗಳ ಮೂಲಕ ವೈರಸ್ ನ್ನು ತಡೆಯಲು ಹೋರಾಟವನ್ನೇ ನಡೆಸುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರನ್ನು ರಕ್ಷಿಸುವಂತೆ ದೇವರಲ್ಲಿ ಪ್ರಾರ್ಥಿಸಿಕೊಳ್ಳುವುದು ಕೂಡ ಅಗತ್ಯವಾಗಿದೆ. ದೇವಾಲಯ, ಮಸೀದಿ, ಚರ್ಚ್ ಸೇರಿದಂತೆ ಇನ್ನಿತರ ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸುವುದರಿಂದ ಮನುಷ್ಯನ ಮಾನಸಿಕ ಸ್ಥೈರ್ಯವೂ ಹೆಚ್ಚಾಗಲಿದೆ ಎಂದು ಧಾರ್ಮಿಕ ಮುಖಂಡರುಗಳು ಅಭಿಪ್ರಾಯಪಟ್ಟರು.
ಕೊರೋನಾ ಮುಕ್ತ ಜಿಲ್ಲೆಯಾಗಿರುವ ಕೊಡಗಿನಲ್ಲಿ ಈಗಾಗಲೇ ವಿವಿಧ ಕ್ಷೇತ್ರಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ. ಇದೇ ಪ್ರಕಾರವಾಗಿ ಪೂಜೆ, ಪ್ರಾರ್ಥನೆಗೂ ಅವಕಾಶ ನೀಡುವುದು ಸೂಕ್ತವೆಂದು ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದರು.
ನಿಯಮಾನುಸಾರ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಲು ಎಲ್ಲಾ ಜನಾಂಗದ ಜನ ಸಿದ್ಧರಿದ್ದಾರೆ. ಕ್ವಾರಂಟೈನ್ ನಲ್ಲಿರುವವರುವವರು ಮತ್ತು ಅನಾರೋಗ್ಯ ಪೀಡಿತರು ಧಾರ್ಮಿಕ ಕೇಂದ್ರಗಳಿಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಮತ್ತು ಎಲ್ಲಾ ವರ್ಗದ ಧಾರ್ಮಿಕ ಕೇಂದ್ರಗಳ ಸಮಿತಿಗಳಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿ ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮೇ 17 ರ ನಂತರ ಈ ಬಗ್ಗೆ ನಿರ್ಧರಿಸುವುದಾಗಿ ಭರವಸೆ ನೀಡಿದರು.
ಕೊರೋನಾ ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತದ ನೇತೃತ್ವದÀಲ್ಲಿ ನಡೆದ ಎಲ್ಲಾ ಪರಿಶ್ರಮಗಳು ಫಲ ನೀಡಿದ್ದು, ಇಂದು ಕೊಡಗು ಕೊರೋನಾ ಮುಕ್ತವಾಗಿದೆ. ಇದಕ್ಕೆ ಕಾರಣಕರ್ತರಾದ ತಮಗೆ ಹಾಗೂ ಅಧಿಕಾರಿ ವರ್ಗಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಪ್ರಮುಖರು ತಿಳಿಸಿದರು.
ಮನವಿ ಸಲ್ಲಿಸುವ ಸಂದರ್ಭ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀಸದಾಶಿವ ಸ್ವಾಮಿಗಳು, ಜಿಲ್ಲೆಯ ಉಪ ಖಾಝಿಗಳಾದ ಅಬ್ದುಲ್ ಫೈಝಿ, ಮಹಮ್ಮದ್ ಮುಸ್ಲಿಯಾರ್, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ.ಯಾಕುಬ್, ಪ್ರಮುಖರಾದ ಉಮ್ಮರ್ ಫೈಜಿ, ಅಫಿಲ್ ಸಹದಿ, ಮಹಮ್ಮದ್ ಹಾಜಿ, ನೂರ್ ಹುದಾ ಹಾಗೂ ಸುಲೇಮಾನ್ ಹಾಜರಿದ್ದರು.