ಗುಂಡಿಕೆರೆ ಮೂಸ ನಿಗೂಢ ಸಾವು ಪ್ರಕರಣ : ಉನ್ನತ ಮಟ್ಟದ ತನಿಖೆಗೆ ಕಾಂಗ್ರೆಸ್ ಆಗ್ರಹ : ಎಸ್ ಪಿ ಗೆ ಮನವಿ ಸಲ್ಲಿಕೆ

15/05/2020

ಮಡಿಕೇರಿ ಮೇ 15 : ಕಳೆದ ತಿಂಗಳು ನಿಗೂಢವಾಗಿ ನಾಪತ್ತೆಯಾಗಿ 5  ದಿನಗಳ ಬಳಿಕ ಶವವಾಗಿ ಪತ್ತೆಯಾದ ಗುಂಡಿಕೆರೆಯ ಮೂಸ ಅವರ ನಿಗೂಢ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿ.ಸಿ.ಸಿ.) ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.
ಈ ಕುರಿತು ಡಿ.ಸಿ.ಸಿ. ಅಧ್ಯಕ್ಷರಾದ ಕೆ.ಕೆ. ಮಂಜುನಾಥ್ ಕುಮಾರ್ ಅವರ ನೇತೃತ್ವದ ನಿಯೋಗ ಶುಕ್ರವಾರದಂದು ಮಡಿಕೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.
ಕಳೆದ ತಿಂಗಳ 7ರಂದು ಎತ್ತು ಖರೀದಿಸಲೆಂದು ಮನೆಯಿಂದ ತೆರಳಿದ ಗುಂಡಿಕೆರೆಯ ಬೇಟೋಳಿ ಗ್ರಾಮದ ಎಂ.ಎಂ. ಮೂಸ ಅವರು ಅಂದು ಮನೆಗೆ ಮರಳಿ ಬಾರದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ನಾಪತ್ತೆಯಾದ ಐದು ದಿನಗಳ ಬಳಿಕ ಬಿಟ್ಟಂಗಾಲ ಸಮೀಪದ ಕೊಳತೋಡು ಗ್ರಾಮದ ಕಾಫಿ ತೋಟದಂಚಿನ ಮರವೊಂದರ ಕೆಳಗೆ ಅವರ ಶವ ಪತ್ತೆಯಾಗಿತ್ತು. ಈ ನಿಗೂಢ ಸಾವಿನ ಬಗ್ಗೆ ಅವರ ಮನೆಯವರಿಗೆ ತೀವ್ರ ಅನುಮಾನವಿದೆ ಎಂದು ನಿಯೋಗದ ನೇತೃತ್ವ ವಹಿಸಿದ್ದ  ಕೆ. ಕೆ. ಮಂಜುನಾಥ್ ಕುಮಾರ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.
ಮೂಸ ಅವರು ಕಾಣೆಯಾದ ಬಗ್ಗೆ ಏಪ್ರಿಲ್ 8ರಂದು ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಅಲ್ಲಿನ  ಸಬ್ಇನ್ಸ್ಪೆಕ್ಟರ್ ಮರಿಸ್ವಾಮಿ ಆರಂಭದಿಂದಲೇ ಪ್ರಕರಣದ ಕುರಿತು ನಿರ್ಲಕ್ಷ್ಯವಹಿಸಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ.  ಆದ್ದರಿಂದ ಅವರು ಈ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ಮಂಜುನಾಥ್ ಕುಮಾರ್ ಅವರು ಇದೇ ಸಂದರ್ಭದಲ್ಲಿ ಎಸ್ಪಿ ಅವರ ಬಳಿ ದೂರಿದರು.
ಯಾರೇ ನಿಗೂಢವಾಗಿ ಸಾವನ್ನಪ್ಪಿದರೂ ಸಹಜವಾಗಿಯೇ ಅನುಮಾನಗಳು ಹುಟ್ಟಿಕೊಳ್ಳುತ್ತದೆ. ಅದೇ ರೀತಿ ಮೂಸ ಅವರ ನಿಗೂಢ ಸಾವಿನ ಕುರಿತು ಅವರ ಕುಟುಂಬದವರಿಗೆ ಮತ್ತು ಗುಂಡಿಕೆರೆ ಗ್ರಾಮಸ್ಥರಿಗೆ ತೀವ್ರ  ಅನುಮಾನಗಳಿವೆ. ಅನುಮಾನಕ್ಕೆ ಪೂರಕವಾದ ಅಂಶಗಳನ್ನು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಬೆಳಕು ಚೆಲ್ಲುವ ಉನ್ನತ ಮಟ್ಟದ ತನಿಖೆ ನಡೆದರೆ ಮಾತ್ರ ಘಟನೆಯ ಸತ್ಯಾಂಶ ಹೊರ ಬರಲು ಸಾಧ್ಯ. ಆದ್ದರಿಂದ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ತಂಡದಿಂದ ಮತ್ತೊಮ್ಮೆ ತನಿಖೆ ನಡೆಸಬೇಕು ಎಂದು ಎಸ್ಪಿ ಅವರಲ್ಲಿ ಕೆ.ಕೆ. ಮಂಜುನಾಥ್ ಕುಮಾರ್ ಅವರು ಮನವಿ ಮಾಡಿದರು.
ಬಡ ಕುಟುಂಬಕ್ಕೆ ಆಧಾರವಾಗಿದ್ದ ಮೂಸ ಅವರ ಅಕಾಲಿಕ ಸಾವಿನಿಂದ ಅವರ ಪತ್ನಿ ತೀವ್ರ ಆಘಾತಕ್ಕೊಳಗಾಗಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಆದ್ದರಿಂದ ನೊಂದ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಅವರು ಎಸ್ಪಿ ಅವರ ಗಮನಸೆಳೆದರು.
ಮನವಿ ಸ್ವೀಕರಿಸಿ ಮಾತನಾಡಿದ ಎಸ್ಪಿ ಡಾ. ಸುಮನ್ ಡಿ.ಪಿ. ಅವರು, ತನಿಖೆ ಪ್ರಗತಿಯಲ್ಲಿದೆ. ಮೃತರ ಮರಣೋತ್ತರ ಪರೀಕ್ಷೆಯ ಎಫ್.ಎಸ್.ಎಲ್. ವರದಿ ಬಂದ ಕೂಡಲೇ ಅದನ್ನು ಸಮಗ್ರವಾಗಿ ಪರಿಶೀಲಿಸಿ ತನಿಖೆಯನ್ನು ಮುಂದುವರಿಸಲಾಗುವುದು. ಎಫ್.ಎಸ್.ಎಲ್. ವರದಿಯಲ್ಲಿ ಮೂಸ ಅವರ ಸಾವಿನ ಬಗ್ಗೆ ಅನುಮಾನಗಳಿರುವ ಅಂಶಗಳಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಕುಟುಂಬಕ್ಕೆ ನ್ಯಾಯ ಒದಗಿಸಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ನಿಯೋಗಕ್ಕೆ ಎಸ್ಪಿ ಅವರು ಭರವಸೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಸಿ.ಸಿ. ಅಧ್ಯಕ್ಷರಾದ ಕೆ. ಕೆ. ಮಂಜುನಾಥ್ ಕುಮಾರ್ ಅವರು,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿಷ್ಠಾವಂತ ರಾಗಿದ್ದು, ಅವರ ಪ್ರಾಮಾಣಿಕ ಕಾರ್ಯವೈಖರಿಗಳು ಜಿಲ್ಲೆಯ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ. ಆದ್ದರಿಂದ ಯಾವುದೇ ಪ್ರಕರಣದ ನ್ಯಾಯಯುತವಾದ ತನಿಖೆಯ  ಬಗ್ಗೆ ಅವರ ಮೇಲೆ ನಂಬಿಕೆ ಇರಿಸಬಹುದಾಗಿದೆ. ಈಗಾಗಲೇ ಅವರು ನ್ಯಾಯ ಒದಗಿಸುವ ಭರವಸೆ ನೀಡಿದ್ದು, ಎಫ್ ಎಸ್.ಎಲ್. ವರದಿ ಬಂದ ನಂತರ ಮತ್ತೊಮ್ಮೆ ಅವರನ್ನು ಭೇಟಿ ಮಾಡಿ ತನಿಖೆಯ ಪ್ರಗತಿ ಬಗ್ಗೆ ಮಾಹಿತಿ ಪಡೆದು, ಅಗತ್ಯವಿದ್ದಲ್ಲಿ ಮುಂದಿನ ಹೋರಾಟದ ರೂಪುರೇಷೆಯನ್ನು ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದರು.
ಎಸ್ಪಿ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬ್ದುಲ್ ರಹಿಮಾನ್ (ಬಾಪು),  ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಎಂ.ಎ. ಉಸ್ಮಾನ್, ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ಅಜ್ಜಳ್ಳಿ ರವಿ, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಸೂರಜ್ ಹೊಸೂರು, ಮೃತ ಮೂಸ ಅವರ ಪುತ್ರ ಎಂ.ಎಂ. ಸಲಾಂ, ಸಹೋದರ ಎಂ.ಎಂ. ಸಾದಲಿ,  ಕೆದಮುಳ್ಳೂರು ಗ್ರಾ.ಪಂ. ಸದಸ್ಯ ಎಂ. ಎಂ. ಇಸ್ಮಾಯಿಲ್, ಬೇಟೋಳಿ ಗ್ರಾ. ಪಂ. ಸದಸ್ಯ  ಕೆ. ಎಂ. ಫಾರೂಕ್, ಬೇಟೋಳಿ ಗ್ರಾ. ಪಂ.ಮಾಜಿ ಉಪಾಧ್ಯಕ್ಷ  ಎಂ.ಎ. ಮೊಯ್ದು,  ಗುಂಡಿಕೆರೆಯ ಪ್ರಮುಖರಾದ ಲಿಯಾಕತ್ ಆಲಿ, ಉಮ್ಮರ್ ಮೊದಲಾದವರು ಇದ್ದರು.