ಕಾವೇರಿ ನದಿ ನಿರ್ವಹಣೆ ಕಾಮಗಾರಿ ಸ್ಥಗಿತ : ಸಂತ್ರಸ್ತರಿಂದ ಆಕ್ರೋಶ

16/05/2020

ಮಡಿಕೇರಿ ಮೇ 16 : ಕುಶಾಲನಗರದ ಕೊಪ್ಪ ಬಳಿ ಕಾವೇರಿ ನದಿಯಲ್ಲಿ ಆರಂಭಗೊಂಡಿದ್ದ ನಿರ್ವಹಣೆ ಕಾಮಗಾರಿ ಸ್ಥಗಿತಗೊಂಡ ಕಾರಣ ಪಟ್ಟಣದ ಪ್ರವಾಹ ಪೀಡಿತ ಬಡಾವಣೆಗಳ ಸಂತ್ರಸ್ತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾವೇರಿ ನದಿ ಕಾಮಗಾರಿ ಪ್ರಾರಂಭಿಕ ಹಂತದಲ್ಲಿಯೇ ಕೆಲವರ ಸ್ವಾರ್ಥ ಸಾಧನೆಯಿಂದ ಸ್ಥಗಿತಗೊಂಡ ಹಿನ್ನಲೆಯಲ್ಲಿ ಕಾಮಗಾರಿಗೆ ಹಿನ್ನಡೆ ಉಂಟಾಗಲು ಕಾರಣಕರ್ತರಾದವರ ಮೇಲೆ ಪ್ರವಾಹ ಸಂತ್ರಸ್ಥರು ಹರಿಹಾಯ್ದಿದ್ದಾರೆ. ತಕ್ಷಣ ಕಾಮಗಾರಿ ಮುಂದುವರೆಸದಿದ್ದಲ್ಲಿ ನದಿಯಲ್ಲಿ ಕುಳಿತು ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಸ್ಥಳೀಯ ಸುದ್ದಿಗಾರರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದÀ ಪಟ್ಟಣದ ವಿವಿಧ ಬಡಾವಣೆಗಳ ಮಹಿಳೆಯರು
ಕಳೆದೆರೆಡು ವರ್ಷಗಳ ಕಾಲ ಕಾವೇರಿ ನದಿ ಪ್ರವಾಹದಿಂದ ಕುಶಾಲನಗರ ಪಟ್ಟಣದ ನಾಗರೀಕರ ಬದುಕು ದುಸ್ತರವಾಗಿದೆ. ಪ್ರವಾಹದಲ್ಲಿ ಎಲ್ಲವನ್ನೂ ಕಳೆದುಕೊಂಡು ಬದುಕುಳಿದಿರುವುದೇ ಹೆಚ್ಚು. ಪ್ರವಾಹ ಉಂಟಾದ ಸಂದರ್ಭ ಸರಕಾರದ ಅಲ್ಪಮೊತ್ತದ ಪರಿಹಾರ ಧನದಿಂದ ಯಾವುದೇ ರೀತಿಯ ಶಾಶ್ವತ ಸಮಸ್ಯೆಗಳು ಪರಿಹಾರವಾಗಿಲ್ಲ. ಕಾವೇರಿ ನದಿಯಲ್ಲಿ ತುಂಬಿರುವ ಕಾಡು ಪೊದೆಗಳನ್ನು, ಸಂಗ್ರಹವಾಗಿರುವ ಮಣ್ಣನ್ನು ತೆರವುಗೊಳಿಸಿದರೆ ಪ್ರವಾಹದ ತೀವ್ರತೆ ಕೊಂಚವಾದರೂ ಇಳಿಮುಖವಾಗುವ ನಿರೀಕ್ಷೆ ಹೊಂದಲಾಗಿತ್ತು. ಇದೀಗ ಕಾಮಗಾರಿಗೆ ಕೆಲವು ಸ್ವಾರ್ಥ ಸಾಧಕರು ವಿನಾಕಾರಣ ಅಡ್ಡಿಯುಂಟು ಮಾಡಿದ್ದಾರೆ. ಜಿಲ್ಲೆಯ ಪತ್ರಿಕೆಯೊಂದರಲ್ಲಿ ಅನಾವಶ್ಯಕ ಗೊಂದಲದ ಹೇಳಿಕೆ ನೀಡಿಕೊಂಡು ಕ್ಷೇತ್ರ ಶಾಸಕರನ್ನು ಸೇರಿದಂತೆ ಅಧಿಕಾರಿಗಳು, ಸಂತ್ರಸ್ಥ ವೇದಿಕೆ ಪ್ರಮುಖರನ್ನು ಅವಹೇಳನ ಮಾಡುತ್ತಿರುವುದು ಖಂಡನೀಯ. ಇದೇ ರೀತಿ ಮುಂದುವರೆದಲ್ಲಿ ಪತ್ರಿಕಾ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಮಹಿಳೆಯರು ಎಚ್ಚರಿಸಿದ್ದಾರೆ. ತಡೆಯೊಡ್ಡುವ ಜನರ ಮನೆ ಮುಂದೆ ಧರಣಿ ಕುಳಿತು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿರುವ ಬಡಾವಣೆಯ ನಿವಾಸಿಗಳು ತಕ್ಷಣ ಕಾಮಗಾರಿ ಆರಂಭಿಸದಿದ್ದರೆ ಭಾರೀ ಪ್ರತಿಭಟನೆಗೆ ಮುಂದಾಗುವುದಾಗಿ ಹೇಳಿದ್ದಾರೆ. ಇದರಿಂದ ಉಂಟಾಗುವ ಕಷ್ಟನಷ್ಟಗಳಿಗೆ ಕಾಮಗಾರಿಗೆ ಅಡ್ಡಿಯುಂಟು ಮಾಡುವವರೇ ಹೊಣೆಯಾಗುತ್ತಾರೆ ಎಂದು ತಿಳಿಸಿದ್ದಾರೆ. ಈಗಾಗಲೆ ಮಳೆಗಾಲ ಆರಂಭವಾಗಿದ್ದು ನದಿಯಲ್ಲಿ ನೀರು ತುಂಬುವ ಮುನ್ನ ಕಾಮಗಾರಿ ಆರಂಭಿಸುವಂತೆ ಪ್ರವಾಹ ಪೀಡಿತ ಶ್ರೀನಿಧಿ ಮತ್ತು ಶೈಲಜಾ ಬಡಾವಣೆಯ 50 ಕ್ಕೂ ಅಧಿಕ ಮಂದಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಕಾಮಗಾರಿ ಸ್ಥಗಿತಗೊಂಡ ಕಾರಣ ಮುಳುಗಡೆ ಪ್ರದೇಶಗಳ ನಿವಾಸಿಗಳಲ್ಲಿ ಆತಂಕ ಮತ್ತೆ ಮನೆಮಾಡಿದೆ ಎಂದು ಅಳಲು ವ್ಯಕ್ತಪಡಿಸಿರುವ ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಶ್ರೀನಿಧಿ ಬಡಾವಣೆಯ ರಾಣಿ, ಭಾಗ್ಯ, ಅಂಬಿಕಾ, ಬಿ.ಜೆ.ಮಂಜುಳಾ ಮತ್ತಿತರರು ಮತ್ತೆ ಪ್ರವಾಹದ ಭೀತಿಯನ್ನು ಎದುರಿಸಬೇಕಾದ ಸ್ಥಿತಿ ನಿರ್ಮಾಣಗೊಳ್ಳುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಅನುಮತಿ ನೀಡಿದ ಪ್ರಕಾರ ಕೂಡಲೆ ಕಾಮಗಾರಿ ಆರಂಭವಾಗದಿದ್ದಲ್ಲಿ ಕಾಮಗಾರಿಗೆ ಹಿನ್ನಡೆ ಮಾಡಿದವರ ನಿವಾಸಗಳ ಮುಂದೆ ಧರಣಿ ಕೂರುವುದಾಗಿ ನೊಂದ ಮಹಿಳೆಯರಾದ ದಿವ್ಯ, ಸರೋಜ, ದೇವೀರಮ್ಮ, ಸುಂದರಮ್ಮ, ಶಿವಮ್ಮ ಮತ್ತಿತರರು ಎಚ್ಚರಿಸಿದ್ದಾರೆ.
ಶೈಲಜಾ ಬಡಾವಣೆ ನಿವಾಸಿಗಳಾದ ವನಜಾಕ್ಷಿ, ತಿರುಮಲಯ್ಯ, ಐಚೆಟ್ಟಿರ ಗಣಪತಿ, ಜಯರಾಂ, ಕಟ್ರತನ ಉತ್ತಪ್ಪ, ಜನಾರ್ಧನ್, ರೇಣು ಶಿವಪ್ಪ, ಭಾರತಿ, ಮಮತಾ ಸುಬ್ಬಯ್ಯ, ಶಾಂತಿ ಮತ್ತಿತರರು ಕೂಡ ಮಳೆ ಆರಂಭಗೊಳ್ಳುವ ಮುನ್ನ ಈ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ.
ಸ್ಥಳೀಯ ಪತ್ರಿಕೆಯೊಂದರ ಮೇಲೆ ಕುಶಾಲನಗರ ಪಟ್ಟಣದ 8 ಬಡಾವಣೆಗಳ ಪ್ರಮುಖರು ಕುಶಾಲನಗರ ಠಾಣೆಯಲ್ಲಿ 8 ದೂರುಗಳನ್ನು ದಾಖಲಿಸಿದ್ದು ಕಾಮಗಾರಿಗೆ ಅಡ್ಡಿಯುಂಟು ಮಾಡುತ್ತಿರುವ ಸಿ.ಪಿ.ಮುತ್ತಣ್ಣ, ಬಿ.ಸಿ.ನಂಜಪ್ಪ ಅವರುಗಳು ಮುಂದೆ ಉಂಟಾಗುವ ಆವಾಂತರಗಳಿಗೆ ಹೊಣೆಯಾಗಬೇಕಾಗುತ್ತದೆ ಎಂದು ದೂರಿದ್ದು ಅವರುಗಳ ಮೇಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇದುವರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಒಟ್ಟು 12 ದೂರುಗಳು ದಾಖಲಾಗಿವೆ.
ಜಿಲ್ಲಾಧಿಕಾರಿಗಳ ಭರವಸೆ: ಕುಶಾಲನಗರ ನದಿ ಪ್ರವಾಹ ಸಂತ್ರಸ್ಥರ ವೇದಿಕೆ ಪ್ರಮುಖರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿ ಕಾಮಗಾರಿಗೆ ಅಡ್ಡಿಯುಂಟು ಮಾಡುವವರ ಮೇಲೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಕ್ಷಣ ಕಾಮಗಾರಿ ಪ್ರಾರಂಬಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.