ಅಂತರ ಕಾಯ್ದುಕೊಂಡು ಶಾಲೆ ನಡೆಯಲಿದೆ

16/05/2020

ಬೆಂಗಳೂರು ಮೇ 15 : ಕೊರೋನಾ ಸೋಂಕು ಸುದೀರ್ಘ ಕಾಲ ಉಳಿಯುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೇ ಶಾಲೆಗಳನ್ನು ನಡೆಸುವ ಅನಿವಾರ್ಯತೆಗೆ ಸಿಲುಕಿರುವ ಶಿಕ್ಷಣ ಇಲಾಖೆ ಎರಡು ಪಾಳಿಗಳಲ್ಲಿ ತರಗತಿಗಳನ್ನು ನಡೆಸಲು ಮುಂದಾಗಿದೆ.
ಈ ಕುರಿತು ರಾಜ್ಯದ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಪ್ರತಿದಿನ ಬೆಳಗ್ಗೆ 7.50ರಿಂದ ಮಧ್ಯಾಹ್ನ 12.20ರವರೆಗೆ ಮೊದಲನೇ ಪಾಳಿ ಮತ್ತು ಮಧ್ಯಾಹ್ನ 12.10ರಿಂದ ಸಂಜೆ 5ರವರೆಗೆ ಎರಡನೇ ಪಾಳಿ ತರಗತಿಗಳನ್ನು ನಡೆಸಬೇಕು. ಇದಕ್ಕೆ ಅನುಗುವಾಗಿ ಶಾಲೆಗಳು ವೇಳಾ ಪಟ್ಟಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕು. ಶಿಕ್ಷಕರು ಕೂಡ ವೇಳಾಪಟ್ಟಿಯಂತೆ ಒಂದು ಪಾಳಿಯಲ್ಲಿ ಮಾತ್ರ ಕೆಲಸ ಮಾಡಬಹುದು ಎಂದು ಸೂಚಿಸಿದೆ.  ಅದರಲ್ಲೂ ಪ್ರಮುಖವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕೊಠಡಿಯ ಕೊರತೆ ಇರುವ ಶಾಲೆಗಳು ಪಾಳಿ ಪದ್ದತಿ ಅಳವಡಿಸಿಕೊಳ್ಳಬಹುದು. ಪಿಯು ತರಗತಿಯ ಕೊಠಡಿಗಳು, ತಾಲೂಕು, ಹೋಬಳಿಗಳಲ್ಲಿ ಮಕ್ಕಳ ಕೊರತೆಯಿಂದ ಮುಚ್ಚಲ್ಪಟ್ಟ ಶಾಲಾ ಕಟ್ಟಡಗಳಲ್ಲಿ ಕೂಡ ತರಗತಿಗಳನ್ನು ನಡೆಸಬಹುದು. ಒಂದು ಬೆಂಚ್ ನಲ್ಲಿ ಕೇವಲ ಮೂರು ವಿದ್ಯಾರ್ಥಿಗಳು ಕುಳಿತುಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.