ಎಸ್.ಎಸ್.ಎಲ್.ಸಿ ಪರೀಕ್ಷೆ ಶೀಘ್ರ ನಿರ್ಧಾರ

16/05/2020

ಚಾಮರಾಜನಗರ ಮೇ 15 : ಎಸ್.ಎಸ್.ಎಲ್.ಸಿ ಪರೀಕ್ಷೆ ಕುರಿತು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿರುವುದರಿಂದ ಅದನ್ನು ನಿವಾರಿಸುವ ಸಲುವಾಗಿ ಸೋಮವಾರ ನಡೆಯುವ ಶಿಕ್ಷಣ ತಜ್ಞರುಗಳ ಸಭೆಯಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ಎಸ್.ಎಸ್.ಎಲ್.ಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಜೊತೆಗೆ ದೂರದರ್ಶನದಲ್ಲಿ ಬಿತ್ತರವಾಗುವ ಎಸ್.ಎಸ್.ಎಲ್.ಸಿ ಪುನರ್‍ಮನನ ಕಾರ್ಯಕ್ರಮಕ್ಕೆ ರಾಜ್ಯದೆಲ್ಲೆಡೆ ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿರುವುದರಿಂದ ಮತ್ತಷ್ಟು ಶೈಕ್ಷಣಿಕ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ಬಿತ್ತರಿಸಲು ದೂರದರ್ಶನದ ಚಂದನ ವಾಹಿನಿಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಹೇಳಿದ್ದಾರೆ.
ಇಂದು ಚಾಮರಾಜನಗರ ಜಿಲ್ಲೆಯ ದೇವಲಾಪುರ ಗ್ರಾಮದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು,
ಕೊರೋನಾ ವೈರಸ್‍ನ ಲಾಕ್‍ಡೌನ್ ನಿಮಿತ್ತ ಎಸ್.ಎಸ್.ಎಲ್..ಸಿ ಪರೀಕ್ಷೆ ಮುಂದೂಡಲ್ಪಟ್ಟಿತ್ತು. ಪ್ರತಿನಿತ್ಯ ಈ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಬಗ್ಗೆ ಸಾಕಷ್ಟು ಗೊಂದಲಗಳು ಉದ್ಬವವಾಗಿರುವುದರಿಂದ ಅಂತಿಮವಾಗಿ ಈ ಗೊಂದಲಗಳಿಗೆ ತೆರೆ ಎಳೆಯುವ ಸಲುವಾಗಿ ನಾಳೆ ಪದವಿಧರ ಹಾಗೂ ಶಿಕ್ಷಣ ಕ್ಷೇತ್ರದ ವಿಧಾನ ಪರಿಷತ್‍ನ ಸದಸ್ಯರ ಜೊತೆಗೆ ವಿಡಿಯೋ ಕಾನ್ಪರೆನ್‍ಸ್ ಮೂಲಕ ಚರ್ಚಿಸಿ, ಸೋಮವಾರ ನಡೆಯುವ ಶಿಕ್ಷಣ ತಜ್ಞರ ಸಮಾಲೋಚನ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು, ಎಸ್.ಎಸ್.ಎಲ್.ಸಿ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆಯ ಸಲಹೆ ಪಡೆದು ಪ್ರಕಟಿಸಲಾಗುವುದು ಎಂದರು.