ಸೋಂಕನ್ನು ಮೆಟ್ಟಿ ನಿಂತ ಮೈಸೂರು
16/05/2020

ಬೆಂಗಳೂರು ಮೇ 16 : ಮಾರಣಾಂತಿಕ ಕೊರೋನಾ ಸೋಂಕನ್ನು ಮೆಟ್ಟಿ ನಿಲ್ಲುವಲ್ಲಿ ಅರಮನೆ ನಗರಿ ಮೈಸೂರು ಯಶಸ್ವಿಯಾಗಿದೆ. ಜಿಲ್ಲೆಯಲ್ಲಿ ದಾಖಲಾಗಿದ್ದ ಎಲ್ಲಾ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಯಾವುದೇ ವ್ಯಕ್ತಿ ಮೃತಪಟ್ಟಿಲ್ಲ.
ಇದು ಜಿಲ್ಲಾಡಳಿತದ ಉತ್ತಮ ಕ್ರಮಗಳ ಫಲ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಜ್ಯುಬಿಲಿಯೆಂಟ್ ಕಾರ್ಖಾನೆಯ ನೌಕರನೋರ್ವನಿಗೆ ತಗುಲಿದ ಕೊರೋನಾ ಸೋಂಕು ಬರೋಬ್ಬರಿ 88 ಜನರಿಗೆ ವ್ಯಾಪಿಸಿತ್ತು. ಇದರಿಂದ ಮೈಸೂರು ಕೆಂಪು ವಲಯ ಹಾಗೂ ಅತಿ ಸೂಕ್ಷ್ಮ ಜಿಲ್ಲೆಯಾಗಿ ಗುರುತಿಸಿಕೊಂಡಿತ್ತು.
ಆದರೆ, ಕೆಲ ದಿನಗಳಿಂದ ಅಲ್ಲಿ ಯಾವುದೇ ಸೋಂಕು ಪತ್ತೆಯಾಗಿರಲಿಲ್ಲ. 88 ಸೋಂಕಿತರ ಪೈಕಿ ಎಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಶುಕ್ರವಾರ ಕೊನೆಯ ಇಬ್ಬರು ಸೋಂಕಿತರು ಚೇತರಿಕೆ ಕಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.