ಗ್ರಾ.ಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸದೆ ಚುನಾಯಿತರನ್ನೇ ಮುಂದುವರೆಸಿ : ಯಾಕುಬ್ ಒತ್ತಾಯ

16/05/2020

ಮಡಿಕೇರಿ ಮೇ 16 : ಸ್ಥಳೀಯ ಸರ್ಕಾರವೆಂದೇ ಗುರುತಿಸಲ್ಪಟ್ಟಿರುವ ಗ್ರಾ.ಪಂ ಗಳ ಅಧಿಕಾರವಧಿ ಪೂರ್ಣಗೊಂಡು ಚುನಾವಣೆ ನಡೆಯಬೇಕಾದ ಹಂತದಲ್ಲೇ ಕೊರೋನಾ ಲಾಕ್ ಡೌನ್ ಎದುರಾಗಿ ಆಡಳಿತಾಧಿಕಾರಿಗಳನ್ನು ನೇಮಿಸುವ ಸಾಧ್ಯತೆಗಳಿದೆ. ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಅಧಿಕಾರಿಗಳನ್ನು ನೇಮಕ ಮಾಡದೆ ಹಾಲಿ ಇರುವ ಚುನಾಯಿತ ಸದಸ್ಯರುಗಳನ್ನೇ ಮುಂದಿನ ಚುನಾವಣೆವರೆಗೆ ಮುಂದುವರೆಸಿ ಚುನಾಯಿತರು ಹಾಗೂ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಸರ್ಕಾರ ಅವಕಾಶ ಕಲ್ಪಿಸಬೇಕೆಂದು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಸಮಿತಿಯ ರಾಜ್ಯ ಉಪಾಧ್ಯಕ್ಷ ಕೆ.ಎ.ಯಾಕುಬ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೇ ತಿಂಗಳ ಅಂತ್ಯದೊಳಗೆ ನಡೆಯಬೇಕಿದ್ದ ಗ್ರಾಮ ಪಂಚಾಯತ್ ಚುನಾವಣೆಗೂ ಕೊರೋನಾ ಲಾಕ್ ಡೌನ್ ಅಡ್ಡಿಯಾಗಿದ್ದು, ಸುಮಾರು 6 ತಿಂಗಳುಗಳ ಕಾಲ ಚುನಾವಣೆಯನ್ನು ಮುಂದೂಡಬೇಕಾದ ಅನಿವಾರ್ಯತೆ ಎದುರಾಗಿದೆ.
ಆದರೆ ಆಡಳಿತಾಧಿಕಾರಿಯ ನೇಮಕ ಅಥವಾ ಬೇರೆ ಯಾವುದೋ ಆಡಳಿತ(ಉಸ್ತುವಾರಿ) ಸಮಿತಿ ನೇಮಕ ಮಾಡುವ ಸರ್ಕಾರದ ಚಿಂತನೆಗೆ ಕಾನೂನಿನಲ್ಲಿ ಅವಕಾಶವಿದ್ದರೂ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇದು ಸೂಕ್ತವಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.
ಕೊರೋನಾ ವೈರಸ್ ವ್ಯಾಪಿಸುವ ಆತಂಕದ ಪರಿಸ್ಥಿತಿ ಘೋಷಣೆಯಾದಾಗ ಮೊದಲು ಸರ್ಕಾರ ಮಾಡಿದ ಕೆಲಸವೆಂದರೆ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಇಲಾಖೆಗಳ, ಸ್ವಯಂ ಸೇವಾ ಸಂಸ್ಥೆಗಳ, ಸ್ವಯಂಸೇವಕರ ಸಂಯೋಜನೆಯಲ್ಲಿ ಕಾರ್ಯಪಡೆ ರೂಪಿಸಿ ಇಡೀ ಪಂಚಾಯತ್‍ನ ವಿಕೋಪ ನಿರ್ವಹಣೆಯ ನೇತೃತ್ವವನ್ನು ಗ್ರಾಮ ಸರ್ಕಾರಕ್ಕೆ ನೀಡಿತು. ಗ್ರಾ.ಪಂ ನ ಚುನಾಯಿತ ಪ್ರತಿನಿಧಿಗಳು ಪಂಚಾಯತ್ ರಾಜ್ ವ್ಯವಸ್ಥೆಯ ಆಶಯದಂತೆ ಪಕ್ಷಾತೀತವಾಗಿ ತಮ್ಮ ಬದ್ಧತೆಯನ್ನು ಜನರಿಗೆ ತೋರಿದ್ದಾರೆ.
ಗ್ರಾಮೀಣ ಜನರ ಅಗತ್ಯತೆಗಳೇನು, ಅಲ್ಲಿನ ಪರಿಸ್ಥಿತಿ ಹೇಗಿದೆ, ಆಗಬೇಕಾದ ಪ್ರಮುಖ ಕಾರ್ಯಗಳೇನು ಹಾಗೂ ಮುಂದಿರುವ ಸವಾಲುಗಳೇನು ಎನ್ನುವುದನ್ನು ಕೂಲಂಕುಷವಾಗಿ ಗಮನಿಸಿದ್ದು, ಸಂದಿಗ್ಧ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಮತ್ತು ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾಯಿತ ವರ್ಗ ಹಾಗೂ ಅಧಿಕಾರಿ ವರ್ಗ ಒಗ್ಗೂಡಿ ಆಡಳಿತ ನಡೆಸಿರುವುದೇ ಸಂದಿಗ್ಧ ಪರಿಸ್ಥಿತಿಯ ಸಮರ್ಪಕ ನಿರ್ವಹಣೆಗೆ ಪ್ರಮುಖ ಕಾರಣವಾಗಿದೆ ಎಂದು ಯಾಕುಬ್ ತಿಳಿಸಿದ್ದಾರೆ.
ಇಂದಿನ ಕೊರೋನಾ ಪರಿಸ್ಥಿತಿ ಮತ್ತು ಮುಂಬರುವ ಮಳೆಗಾಲದ ವಿಕೋಪದ ಸವಾಲಿನ ಸಮಯದಲ್ಲಿ, ಪಂಚಾಯತ್ ಆಡಳಿತಕ್ಕೆ ಕೇವಲ ಆಡಳಿತಾಧಿಕಾರಿಯ ಅಥವಾ ಆಡಳಿತ ಸಮಿತಿಯ ನೇಮಕ ಅಸಮಂಜಸವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸರ್ಕಾರ ಈ ನಿರ್ಧಾರವನ್ನು ತಕ್ಷಣ ಕೈಬಿಟ್ಟು, ಪ್ರಸ್ತುತ ಇರುವ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಿರುವ ಸ್ಥಳೀಯ ಸರ್ಕಾರವನ್ನೇ ಮಧ್ಯಂತರ ಸ್ಥಳೀಯ ಸ್ವಯಂ ಸರ್ಕಾರವನ್ನಾಗಿ (ಸ್ಥಳೀಯಾಡಳಿತ ಸಮಿತಿಯಾಗಿ) ಮುಂದುವರಿಸಬೇಕು ಎಂದು ಯಾಕುಬ್ ಒತ್ತಾಯಿಸಿದ್ದಾರೆ.