ಸಮಾನ ವೇತನ ಮತ್ತು ಸೇವಾ ಭದ್ರತೆಗಾಗಿ ಆರೋಗ್ಯ ಸಿಬ್ಬಂದಿಗಳ ಆಗ್ರಹ

16/05/2020

ಮಡಿಕೇರಿ ಮೇ 16 : ಸಮಾನ ವೇತನ ಮತ್ತು ಸೇವಾ ಭದ್ರತೆಗಾಗಿ ಆಗ್ರಹಿಸಿ ಕೊಡಗು ಜಿಲ್ಲಾ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಸಂಘ ಕಪ್ಪುಪಟ್ಟಿ ಧರಸಿ ಕಾರ್ಯನಿರ್ವಹಿಸುವ ಮೂಲಕ ಸಾಂಕೇತಿಕ ಪ್ರತಿಭಟನೆಯಿಂದ ಸರ್ಕಾರದ ಗಮನ ಸೆಳೆಯುತ್ತಿದೆ.
ಈ ಸಂದರ್ಭ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಂ.ಮಹದೇವಪ್ಪ ಕೊರೋನಾ ವೈರಸ್ ವಿರುದ್ಧ ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಿರುವ ಆರೋಗ್ಯ ಇಲಾಖಾ ಗುತ್ತಿಗೆ ಆಧಾರದ ಸಿಬ್ಬಂದಿಗಳಿಗೆ ಸರ್ಕಾರದ ವತಿಯಿಂದ ಯಾವುದೇ ಭದ್ರತೆ ಮತ್ತು ಸೌಲಭ್ಯ ನೀಡಿಲ್ಲವೆಂದು ಆರೋಪಿಸಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನದ ನೌಕರರಿಗೆ ಈಗಾಗಲೇ ಘೋಷಿಸಿರುವ ಬೋನಸ್‍ಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ಬಾಕಿ ಇರುವ ಬೋನಸ್ ಹಣ ನೀಡಬೇಕು, ಗುತ್ತಿಗೆ, ಹೊರಗುತ್ತಿಗೆ ನೌಕರರ ಎಜೆನ್ಸಿಯ ಬದಲಾವಣೆಯ ಹೆಸರಿನಲ್ಲಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಸಕಾಲದಲ್ಲಿ ವೇತನವನ್ನು ನೀಡಬೇಕು, ಸಮಾನ ವೇತನವನ್ನು ನಿಗಧಿ ಮಾಡಬೇಕು ಮತ್ತು ಸೇವಾ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ಇದೇ ಮೇ 21 ರವರೆಗೆ ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿರುವುದಾಗಿ ಮಹದೇವಪ್ಪ ತಿಳಿಸಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೋಹನ್ ಅವರ ಮೂಲಕ ಸಂಘದ ಪ್ರಮುಖರು ಇದೇ ಸಂದರ್ಭ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.