ಕೊಡಗಿನಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ : ಮುಂಬೈನಿಂದ ಆಗಮಿಸಿದ ಮಹಿಳೆಗೆ ಸೋಂಕು

18/05/2020

ಮಡಿಕೇರಿ ಮೇ 18 : ಮುಂಬೈನಿಂದ ಕೊಡಗಿಗೆ ಆಗಮಿಸಿದ ಮಹಿಳೆಯೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ಜಿಲ್ಲಾ ಕೇಂದ್ರ ಮಡಿಕೇರಿಯ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದರಿಂದ ಜಿಲ್ಲೆಯ ಜನತೆ ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿ ಆಯೋಜಿತ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅವರು, ಕಳೆದ ಮಾರ್ಚ್ 16 ರಂದು ದುಬೈನಿಂದ ಜಿಲ್ಲೆಗೆ ಆಗಮಿಸಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಕಾಣಿಸಿಕೊಂಡಿತ್ತು(ರಾಜ್ಯದ 350ನೇ ಪ್ರಕರಣ). ಅವರು ಅಗತ್ಯ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಹೊರ ಬಂದ ಬಳಿಕ ಇಲ್ಲಿಯವರೆಗೆ ಹೊಸ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಇದೀಗ ರಾಜ್ಯದ 1224 ನೇ ಪ್ರಕರಣವಾಗಿ ಜಿಲ್ಲೆಗೆ ಆಗಮಿಸಿರುವ 45 ರ ಪ್ರಾಯದ ಮಹಿಳೆಯಲ್ಲಿ ಕೊರೊನಾ ಸೋಂಕು ಗೋಚರಿಸಿರುವುದಾಗಿ ಮಾಹಿತಿ ನೀಡಿದರು.

ಪ್ರಯಾಣ ವಿವರ- ಮುಂಬೈನಲ್ಲಿ ಹೌಸ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಡಿಕೇರಿ ತಾಲ್ಲೂಕಿನ ಮಹಿಳೆಯೊಬ್ಬರು ಸೇರಿದಂತೆ 14 ಮಂದಿ ಇದೇ ಮೇ14 ರಂದು ಬಸ್‍ವೊಂದರಲ್ಲಿ ಮಂಗಳೂರಿಗೆ ಮೇ15 ರಂದು ಸಂಜೆ ತಲುಪಿದ್ದು, ಇವರಲ್ಲಿ 13 ಮಂದಿ ಉಡುಪಿ ಮತ್ತು ಮಂಗಳೂರಿಗೆ ಸೇರಿದವರಾಗಿದ್ದರು. ಕೊಡಗಿಗೆ ಬರಬೇಕಾದ ಮಹಿಳೆ ಮಂಗಳೂರಿನ ಉರುವಾ ಪೊಲೀಸ್ ಠಾಣೆಗೆ ಸಂಜೆ 5.30ಕ್ಕೆ ಆಗಮಿಸಿ, ಬಳಿಕ ಟ್ಯಾಕ್ಸಿ ಮೂಲಕ ಕೊಡಗಿನ ಗಡಿ ಸಂಪಾಜೆÉಗೆ ರಾತ್ರಿ 9 ಗಂಟೆಗೆ ಆಗಮಿಸಿದ್ದಾಗಿ ಮಾಹಿತಿ ನೀಡಿದರು.

ಸಂಪಾಜೆ ಚೆಕ್ ಪೋಸ್ಟ್‍ನಲ್ಲಿ ಮುಂಬೈನಿಂದ ಬಂದ ಮಹಿಳೆಯನ್ನು ಪರೀಕ್ಷಿಸಿ, ಅವರನ್ನು ತಕ್ಷಣ ಅವರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆÉ ದಾಖಲಿಸಲಾಗಿತ್ತು. ಅವರ ಗಂಟಲು ಮಾದರಿ ಪರೀಕ್ಷಾ ವರದಿ ಇಂದು ಬೆಳಗ್ಗೆ ಕೈ ಸೇರಿದ್ದು, ಅದರಲ್ಲಿ ಮಹಿಳೆ ಕೊರೊನಾ ಸೋಂಕಿಗೆ ಒಳಗಾಗಿರುವುದು ದೃಢ ಪಟ್ಟಿರುವುದಾಗಿ ತಿಳಿಸಿದರು.

ಮುಂಬೈನಿಂದ ನೇರವಾಗಿ ಕೊಡಗಿಗೆ ಬಂದಿರುವ ಮಹಿಳೆ ಜಿಲ್ಲೆಯ ಯಾವುದೇ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿಲ್ಲವಾದ್ದರಿಂದ , ಹಿಂದಿನ ಪ್ರಕರಣದಂತೆ ಕಂಟೈನ್‍ಮೆಂಟ್ ಜೋನ್, ಬಫರ್ ಜೋನ್ ಮೊದಲಾದವುಗಳ ಘೋಷಣೆ ಈ ಪಕರಣದಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಯಾವುದೇ ಆತಂಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದರು..

6 ಮಂದಿ ಸಾಂಸ್ಥಿಕ ಸಂಪರ್ಕ ತಡೆಯಲ್ಲಿ – ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ವಿದೇಶಗಳಿಂದ ಆಗಮಿಸಿದ 6 ಮಂದಿ ಇದ್ದು, ಅವರನ್ನು ಸಾಂಸ್ಥಿಕ ಸಂಪರ್ಕ ತಡೆÀಗೆ ಒಳಪಡಿಸಲಾಗಿದೆ. ಸೋಮವಾರ ಬೆಳಗ್ಗೆಯಷ್ಟೆ ಕಣ್ಣೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿದವರಲ್ಲಿ ಒಬ್ಬರು ಗರ್ಭಿಣಿ ಮಹಿಳೆ ಮತ್ತು ಇಬ್ಬರು ಮಕ್ಕಳು ಇದ್ದು, ಇವರನ್ನು ಸಾಂಸ್ಥಿಕ ಸಂಪರ್ಕ ತಡೆಗೆ ಒಳಪಡಿಸಿರುವುದಾಗಿ ಮಾಹಿತಿ ನಿಡಿದರು.

ಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಖಾರಿ ಡಾ. ಸುಮನ್ ಡಿ. ಪನ್ನೇಕರ್, ಡಿಹೆಚ್‍ಒ ಡಾ.ಮೋಹನ್ ಉಪಸ್ಥಿತರಿದ್ದರು.