ಬೆಳ್ಳೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿ : ಕ್ರಮಕ್ಕೆ ರೈತ ಮುಖಂಡರ ಒತ್ತಾಯ

ಮಡಿಕೇರಿ ಮೇ 18 : ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದ ಕಳ್ಳೇಂಗಡ ದಿನೇಶ್ ದೇವಯ್ಯ ಅವರ ಹಾಲು ಕರೆಯುವ ಹಸುವನ್ನು ಹಾಡು ಹಗಲೇ ಹುಲಿ ದಾಳಿ ಮಾಡಿ ಕೊಂದು ಹಾಕಿದ ಘಟನೆ ನಡೆದಿದೆ.
ಬೆಳಿಗ್ಗೆ ತನ್ನ ಜರ್ಸಿ ತಳಿಯ ದೊಡ್ಡ ಹಸು ಹಾಗೂ ಆರು ತಿಂಗಳ ಕರುವನ್ನು ಮೇಯಲು ದಿನೇಶ್ ದೇವಯ್ಯ ಅವರು ಗದ್ದೆಯಲ್ಲಿ ಕಟ್ಟಿ ಮನೆಗೆ ಬಂದಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಹಸು ಹಾಗೂ ಕರುವನ್ನು ಕೊಟ್ಟಿಗೆಗೆ ಕರೆ ತರಲು ಹೋದಾಗ ಹಸುವನ್ನು ಹುಲಿ ಕೊಂದು ಹಾಕಿರುವುದು ಕಂಡು ಬಂದಿದೆ. ಕರುವನ್ನು ಮರಳಿ ಕೊಟ್ಟಿಗೆಗೆ ಕರೆ ತರುವಾಗ ಕೇವಲ 5 ಅಡಿ ದೂರದಲ್ಲಿ ಹುಲಿಯನ್ನು ಎದುರುಗೊಂಡು ದಿನೇಶ್ ದೇವಯ್ಯ ಭಯ ಬೀತರಾಗಿ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಪ್ರಭಾರ ಡಿ.ಎಫ್.ಓ.ಕೋಣೇರಿರ ರೋಶಿನಿ, ಎ.ಸಿ.ಎಫ್ ಶ್ರೀಪತಿ, ಪೆÇನ್ನಂಪೇಟೆ ಆರ್.ಎಫ್.ಓ. ತೀರ್ಥ, ಪಶು ವೈದ್ಯ ಚಂದ್ರಶೇಖರ್, ಅರಿವಳಿಕೆ ತಜ್ಞ ಡಾ.ಸನತ್, ಡಬ್ಲು.ಐ.ಐ. ಕನ್ಸಲ್ಟೆಂಟ್ ಚಕ್ಕೇರ ತಮ್ಮಯ್ಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಅರಿವಳಿಕೆ ತಜ್ಞ ಡಾ. ಸನತ್ ನೇತೃತ್ವದಲ್ಲಿ ಕಾರ್ಯಚರಣೆ ಆರಂಭಿಸಲಾಗಿದೆ.
ಸ್ಥಳಕ್ಕೆ ಟಿ.ಶೆಟ್ಟಿಗೇರಿ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಹಾಗೂ ಆರ್.ಎಮ್.ಸಿ. ಸದಸ್ಯ ಕಟ್ಟೇರ ಈಶ್ವರ, ರೈತ ಮುಖಂಡರಾದ ದೇಕಮಾಡ ವಿನು, ಮಚ್ಚಮಾಡ ಸುಬ್ರಮಣಿ, ಕಟ್ಟೇರ ಮಿಲನ್, ಮಿತನ್, ಕವನ್, ಕರ್ಣಂಡ ಚಲನ್ ಮತ್ತಿತರರು ಹಾಜರಿದ್ದು, ತಕ್ಷಣ ಪರಿಹಾರ ನೀಡುವಂತೆ ಹಾಗೂ ಹುಲಿ ಸೆರೆಗೆ ಒತ್ತಾಯಿಸಿದರು.