ಅಕ್ರಮ ಮದ್ಯ ಮಾರಾಟ ಕಂಡು ಬಂದಲ್ಲಿ ಕಠಿಣ ಕ್ರಮ : ಕೊಡಗು ಅಬಕಾರಿ ಉಪ ಆಯುಕ್ತೆ ಎಚ್ಚರಿಕೆ

18/05/2020

ಮಡಿಕೇರಿ ಮೇ.18 : ಜಿಲ್ಲಾಡಳಿತ ವತಿಯಿಂದ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಅಹವಾಲು ಆಲಿಸುವ ಫೋನ್ ಇನ್ ಕಾರ್ಯಕ್ರಮವು ಸೋಮವಾರ ನಡೆಯಿತು.
ಸೋಮವಾರಪೇಟೆಯಿಂದ ಜನಾರ್ಧನ್ ಅವರು ಕರೆ ಮಾಡಿ ಗ್ರಾಮೀಣ ಪ್ರದೇಶದ ಕೆಲವು ಭಾಗಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಇಂತವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಬಕಾರಿ ಉಪ ಆಯುಕ್ತರಾದ ಪಿ.ಬಿಂದುಶ್ರೀ ಅವರು ಈಗಾಗಲೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವವರನ್ನು ಪತ್ತೆ ಹಚ್ಚಿ ಅಂತಹವರ ವಿರುಧ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ನಿರ್ದಿಷ್ಠ ಪ್ರದೇಶದಲ್ಲಿ ಈಗಲೂ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಲ್ಲಿ ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಿದ್ದಾಪುರದಿಂದ ನಂಜಪ್ಪ ಅವರು ಕರೆ ಮಾಡಿ ಲಾಕ್‍ಡೌನ್ ಸಮಯದಲ್ಲಿ ಕೆಲವು ಮದ್ಯದ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಬಕಾರಿ ಉಪ ಆಯುಕ್ತರು ಲಾಕ್‍ಡೌನ್ ಸಮಯದಲ್ಲಿ ಮದ್ಯದಂಗಡಿಗಳಲ್ಲಿ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡಿದ ಮದ್ಯದಂಗಡಿಗಳ ವಿರುಧ್ಧ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ ಎರಡು ಮದ್ಯದಂಗಡಿಗಳ ಪರವಾನಗಿ ರದ್ದುಪಡಿಸಲಾಗಿದೆ ಎಂದರು.
ಚೌಡ್ಲು ಗ್ರಾಮದಿಂದ ಉಮೇಶ್ ಅವರು ಕರೆ ಮಾಡಿ ಕೆಲವು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಬಕಾರಿ ಆಯುಕ್ತರು ಅಂತಹ ಅಂಗಡಿಗಳ ಪೂರ್ಣ ಮಾಹಿತಿಯನ್ನು ನೀಡಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ಅಬಕಾರಿ ನೀರಿಕ್ಷಕರಾದ ಯಶವಂತ್ ಕುಮಾರ್, ಆರ್.ಎನ್.ಚೈತ್ರ, ಭಾಗ್ಯ, ಎಂ.ಪಿ.ಸಂಪತ್ ಕುಮಾರ್ ಇತರರು ಇದ್ದರು.