ಜೂನ್ 1 ರವರೆಗೆ ಕೊಡಗಿನ ಖಾಸಗಿ ಬಸ್ ಗಳು ರಸ್ತೆಗಿಳಿಯಲ್ಲ

18/05/2020

ಮಡಿಕೇರಿ ಮೇ 18 : ಕೊರೋನಾ ಲಾಕ್ ಡೌನ್ ನಿಂದ ಕಳೆದ 60 ದಿನಗಳಿಂದ ರಸ್ತೆಗಿಳಿಯದ ಕೊಡಗಿನ ಖಾಸಗಿ ಬಸ್ ಗಳು ಜೂನ್ 1 ರವರೆಗೆ ಸಂಚಾರ ಆರಂಭಿಸುವುದಿಲ್ಲವೆಂದು ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಸ್ಪಷ್ಟ ಪಡಿಸಿದ್ದಾರೆ.
ಖಾಸಗಿ ಬಸ್ ಮಾಲೀಕರ ರಾಜ್ಯ ಸಂಘ ಸರ್ಕಾರದ ಮುಂದೆ ಕೆಲವು ಬೇಡಕೆಗಳನ್ನಿಟ್ಟಿದೆ. ಇವುಗಳು ಈಡೇರಿದರೆ ಮೇ ಕೊನೆಯ ವಾರದಲ್ಲಿ ಚರ್ಚಿಸಿ ಜೂ.1 ರ ನಂತರ ಬಸ್ ಗಳನ್ನು ರಸ್ತೆಗಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳುಗಳಿಂದ ಬಸ್ ಗಳು ನಿಂತಲ್ಲೇ ನಿಂತಿರುವುದರಿಂದ ಬ್ಯಾಟರಿ ಸೇರಿದಂತೆ ಕೆಲವು ಬಿಡಿ ಭಾಗಗಳು ಹಾಳಾಗಿರುತ್ತವೆ. ಇವುಗಳ ನಷ್ಟವನ್ನು ಸರ್ಕಾರ ತುಂಬಬೇಕು. ಅಲ್ಲದೆ ಡೀಸೆಲ್ ಗೆ ಸಬ್ಸಿಡಿ ನೀಡುವ ಭರವಸೆಯನ್ನೂ ಸರ್ಕಾರ ನೀಡಬೇಕು. ಎಲ್ಲಾ ಕ್ಷೇತ್ರದ ಮಂದಿಗೆ ವಿಶೇಷ ಪ್ಯಾಕೇಜ್ ಗಳ ಮೂಲಕ ಸರ್ಕಾರ ಆರ್ಥಿಕ ನೆರವು ನೀಡಿದೆ. ಆದರೆ ಸಂಕಷ್ಟದಲ್ಲಿರುವ ಖಾಸಗಿ ಬಸ್ ಮಾಲೀಕರಿಗೆ ಏನನ್ನೂ ನೀಡಿಲ್ಲವೆಂದು ರಮೇಶ್ ಜೋಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.