ವೈದ್ಯ ವಿದ್ಯಾರ್ಥಿಗಳ ವೇತನ ಹೆಚ್ಚಳ

ಬೆಂಗಳೂರು ಮೇ 18 : ಸರ್ಕಾರಿ ವೈದ್ಯಕೀಯ ಬೋಧಕ ಸಿಬ್ಬಂದಿಗೆ 7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ವೇತನ ಹೆಚ್ಚಳ ಹಾಗೂ ವೈದ್ಯ ವಿದ್ಯಾರ್ಥಿಗಳ ವೇತನ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ನೀಡಿದ್ದ ಭರವಸೆಯಂತೆ ವೈದ್ಯ ವಿದ್ಯಾರ್ಥಿಗಳ ಶಿಷ್ಯವೇತನವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪರಿಷ್ಕರಣೆ ಪ್ರಸ್ತಾವಕ್ಕೆ ಕೊನೆಗೂ ಮುಕ್ತಿ ದೊರಕಿದಂತಾಗಿದೆ.
ಕೋವಿಡ್ ಸಂಕಷ್ಟದಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಲವಾರು ರಾಜ್ಯಗಳು ವೈದ್ಯರ ವೇತನ ಕಡಿತಗೊಳಿಸಿರುವ ಸಂದರ್ಭದಲ್ಲಿ ವೈದ್ಯರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ವೇತನ ಪರಿಷ್ಕರಣೆ ಮಾಡಲಾಗಿದೆ.
ಕಳೆದ ಫೆ.26 ರಂದು “ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್’ ಸಂಘಟನೆ ಪ್ರತಿನಿಧಿಗಳ ನಿಯೋಗ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿ, ಈ ಕುರಿತು ಮನವಿ ಸಲ್ಲಿಸಿತ್ತು. ಮನವಿ ಸ್ವೀಕರಿಸಿದ್ದ ಸಚಿವ ಸುಧಾಕರ್ ಅವರು, “ಮೂರ್ನಾಲ್ಕು ತಿಂಗಳಲ್ಲಿ ಈ ಕುರಿತು ಖಚಿತ ತೀರ್ಮಾನ ಕೈಗೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದರು. ಬಳಿಕ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದರು.