ವಲಸೆ ಕಾರ್ಮಿಕರಿಗೆ ಅಕ್ಕಿ ಉಚಿತ

ಬೆಂಗಳೂರು ಮೇ 18 : ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಪ್ಯಾಕೇಜ್ -2 ಬಿಡುಗಡೆ ಮಾಡಿದ್ದು, ವಲಸೆ ಕಾರ್ಮಿಕರಿಗೆ ಮೇ ಮತ್ತು ಜೂನ್ ನಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲು ನಿರ್ಧಾರ ಕೈಗೊಂಡಿದೆ.
ವಲಸೆ ಕಾರ್ಮಿಕರಿಗೆ ಇದೇ ತಿಂಗಳ 26 ರಿಂದ 31ರವರೆಗೆ ಪ್ರತಿ ವ್ಯಕ್ತಿಗೆ 5ಕೆ.ಜಿ ಅಕ್ಕಿ ಉಚಿತವಾಗಿ ನೀಡಲು ನಿರ್ಧರಿಸಿದ್ದು ಮುಂದಿನ ತಿಂಗಳು ಜೂನ್ 1 ರಿಂದ ಜೂನ್ 10 ರವರೆಗೆ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಮತ್ತು ಪ್ರತಿ ಕುಟುಂಬಕ್ಕೆ 2 ಕೆಜಿ ಕಡಲೆಕಾಳು ಉಚಿತವಾಗಿ ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕರ ಸರಬರಾಜು ಸಚಿವ ಕೆ. ಗೋಪಾಲಯ್ಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಇನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಪ್ಯಾಕೇಜ್ 2ರ ಸಂಪೂರ್ಣ ವೆಚ್ಚ ಕೇಂದ್ರ ಸರ್ಕಾರ ವಹಿಸಿಕೊಂಡಿದೆ. ಇದಕ್ಕೆ 40.193 ಮೆಟ್ರಿಕ್ ಟನ್. ಅಕ್ಕಿ ಹಾಗೂ 2,544 ಟನ್ ಕಡಲೆಕಾಳು ಅವಶ್ಯಕತೆಯಿದ್ದು, ಇದರಲ್ಲಿ ಏನಾದರೂ ಕಡಿಮೆಯಾದರೆ ಕೇಂದ್ರದಿಂದ ಕಳಿಸಿಕೊಡಲಾಗುತ್ತದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದು ಸಚಿವ ಗೋಪಾಲಯ್ಯ ಅವರು ಹೇಳಿದರು.