ಮಡಿಕೇರಿ ನಗರ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ : ನಾಲ್ವರು ಬೈಕ್ ಕಳ್ಳರ ಬಂಧನ

19/05/2020

ಮಡಿಕೇರಿ ಮೇ 19 : ಕೊಡಗು ಜಿಲ್ಲೆಯ ವಿವಿಧೆಡೆ ಬೈಕ್‍ಗಳು ಮತ್ತು ರಿವಾಲ್ವರ್‍ವೊಂದನ್ನು ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಡಿಕೇರಿ ತಾಲ್ಲೂಕಿನ ಮೂರ್ನಾಡಿನ ಅರುಣ ಕೆ.ಬಿ.(40 ವರ್ಷ), ಮದೆನಾಡು ಸಮೀಪದ ಮೊಣ್ಣಂಗೇರಿ ಗ್ರಾಮದ ನಿವಾಸಿ ಖಾಸಗಿ ಬಸ್ ಕಂಡಕ್ಟರ್ ಸಚಿನ್ ಎಂ.(21), ಮೂರ್ನಾಡು ಬಳಿಯ ಹೊದ್ದೂರು ಗ್ರಾಮದ ಕಾರ್ತಿಕ್ (20) ಹಾಗೂ ಐಕೊಳ ಗ್ರಾಮದ ನಿವಾಸಿ, ಖಾಸಗಿ ಬಸ್ ಕಂಡಕ್ಟರ್ ವಾಸು ಕೆ.ಆರ್. ಎಂಬವರೆ ಬಂಧಿತ ಆರೋಪಿಗಳು.
ಮೂರು ಸ್ಲೆಂಡರ್, ಒಂದು ಆರ್‍ಎಕ್ಸ್ ಮತ್ತು ಒಂದು ಟಿವಿಎಸ್ ಬೈಕ್ ಹಾಗೂ ವೀರಾಜಪೇಟೆ ತಾಲ್ಲೂಕಿನ ಕಡಂಗ ಗ್ರಾಮದ ಮನೆಯೊಂದರಿಂದ ಕಳವು ಮಾಡಲಾಗಿದ್ದ .32 ವೆಬ್ಲಿ ಸ್ಕಾಟ್ ರಿವಾಲ್ವರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾದಿಕಾರಿ ಡಾ. ಸುಮನ್ ಡಿ.ಪನ್ನೇಕರ್ ಅವರು ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಬಿ.ಪಿ. ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ರಚಿಸಲಾಗಿದ್ದ ತಂಡ ಮೇ18 ರಂದು, ಕಳುವಾಗಿದ್ದ ಬೈಕ್‍ನಲ್ಲಿ ಓಡಾಡುತ್ತಿದ್ದ ಅರುಣ್ ಕೆ.ಬಿ. ಮತ್ತು ಸಚಿನ್ ಎಂ. ಅವರನ್ನು ಬಂಧಿಸಿ ಬೈಕ್ ವಶಪಡಿಸಿಕೊಂಡು, ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.
ಈ ಸಂದರ್ಭ ಇವರೊಂದಿಗೆ ಬೈಕ್ ಕಳವಿನಲ್ಲಿ ಪಾಲ್ಗೊಂಡಿದ್ದವರ ಬಗ್ಗೆ ದೊರೆತ ಮಾಹಿತಿ ಆಧರಿಸಿ ಆರೋಪಿಗಳಾದ ಕಾರ್ತಿಕ್ ಮತ್ತು ವಾಸು ಕೆ.ಆರ್. ಅವರನ್ನು ಬಂಧಿಸಲಾಯಿತು. ಇವರ ಬಳಿಯಲ್ಲಿದ್ದ ರಿವಾಲ್ವರನ್ನು ವಶಪಡಿಸಿಕೊಂಡು ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಕಡಂಗದ ಕಾಫಿ ತೋಟವೊಂದರಲ್ಲಿ ಕಪಾತು ಕೆಲಸಕ್ಕೆ ತೆರಳಿದ್ದ ಆರೋಪಿಗಳು, ಮನೆ ಮಾಲೀಕರಿಲ್ಲದ ಸಂದರ್ಭ ಸಾಧಿಸಿ ರಿವಾಲ್ವರ್ ಕಳವು ಮಾಡಿದ್ದು ಬೆಳಕಿಗೆ ಬಂದಿತೆಂದು ಮಾಹಿತಿ ನೀಡಿದರು.
ಎಸ್‍ಪಿ ಡಾ. ಸುಮನ್ ಡಿ. ಪನ್ನೇಕರ್, ಡಿವೈಎಸ್‍ಪಿ ಬಿ.ಪಿ. ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ, ಮಡಿಕೇರಿ ನಗರ ವೃತ್ತದ ಸಿಐ ಅನೂಪ್ ಮಾದಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ , ಮಡಿಕೇರಿ ನಗರ ಠಾಣಾ ಎಸ್‍ಐ ಅಂತಿಮ ಎಂ.ಟಿ., ಸಹಾಯಕ ಉಪ ನಿರೀಕ್ಷಕರಾದ ಹೊನ್ನಪ್ಪ ಕೆ.ಜಿ., ಮಡಿಕೇರಿ ನಗರ ವೃತ್ತ ಕಛೇರಿಯ ಕಿರಣ್, ಸಿ.ಯು. ಚರ್ಮಣ, ಮಡಿಕೇರಿ ನಗರ ಪೊಲೀಸ್ ಠಾಣಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಕೆ.ಕೆ. ದಿನೇಶ್, ಶ್ರ್ರೀನಿವಾಸ್, ಪ್ರವೀಣ್ ಬಿ.ಕೆ., ನಾಗರಾಜ್ ಕಡಗನ್ನವರ್, ಸಿಬ್ಬಂದಿಗಳಾದ ಅರುಣ್ ಕುಮಾರ್ ಬಿ.ಜಿ., ಉತ್ತಪ್ಪ ಕೆ.ಎ., ಸುನಿಲ್ ಬಿ.ಒ., ನಂದ ಕುಮಾರ್, ಓಮನ ಸಿ.ಜಿ., ಭವಾನಿ, ಸೌಮ್ಯ, ಜಿಲ್ಲಾ ಕಛೇರಿಯ ಸಿ.ಕೆ. ರಾಜೇಶ್ ಮತ್ತು ಗಿರೀಶ್ ಪಾಲ್ಗೊಂಡಿದ್ದರು.