ಮರಳು ದಂಧೆಗೆ ಕಡಿವಾಣ ಹಾಕದಿದ್ದಲ್ಲಿ ಧರಣಿ ಸತ್ಯಾಗ್ರಹ : ಕಟ್ಟೆಮಾಡು ಪರಂಬು ಪೈಸಾರಿ ನಿವಾಸಿಗಳ ಎಚ್ಚರಿಕೆ

ಮರಳು ದಂಧೆಗೆ ಕಡಿವಾಣ ಹಾಕದಿದ್ದಲ್ಲಿ ಧರಣಿ ಸತ್ಯಾಗ್ರಹ : ಕಟ್ಟೆಮಾಡು ಪರಂಬು ಪೈಸಾರಿ ನಿವಾಸಿಗಳ ಎಚ್ಚರಿಕೆ
ಮಡಿಕೇರಿ ಮೇ 19 : ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿಯ ಸಂಪರ್ಕ ರಸ್ತೆಯ ದುಸ್ಥಿತಿಗೆ ಕಾರಣವಾಗಿರುವ ಮರಳು ದಂಧೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿರುವ ಅಲ್ಲಿನ ನಿವಾಸಿಗಳು, ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮರಗೋಡು ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರುವ ಕೆ.ಎಸ್.ಹರೀಶ್ ಹಾಗೂ ಇತರರು, ಕಟ್ಟೆಮಾಡು ಗ್ರಾಮದ ಮುಖ್ಯ ರಸ್ತೆಯಿಂದ ಪರಂಬು ಪೈಸಾರಿಗೆ 3ಕೀ.ಮೀ ಅಂತರವಿದ್ದು, ಕಳೆದ ಸಾಲಿನ ಪ್ರವಾಹ ಮತ್ತು ಅತಿವೃಷ್ಟಿಯಿಂದ ಪರಂಬು ಪೈಸಾರಿಯಲ್ಲಿರುವ 113 ಮನೆಗಳು ನೀರಿನಿಂದ ಮುಳುಗಡೆಯಾಗಿ 33 ಮನೆಗಳ ಸಂಪೂರ್ಣ ನೆಲಸಮವಾಗಿವೆ. ಅಲ್ಲದೆ ಈ ಸಂದರ್ಭ ಒಂದು ಸಾವು ಕೂಡಾ ಸಂಭವಿಸಿದೆ ಎಂದು ತಿಳಿಸಿದರು.
ಪರಂಬು ಪೈಸಾರಿಯಲ್ಲಿ ಬಹುತೇಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರೇ ಹೆಚ್ಚಿದ್ದು, ಉಳಿದ ಜನಾಂಗದವರೂ ವಾಸವಿದ್ದಾರೆ. ಮುಖ್ಯ ರಸ್ತೆಯಿಂದ ಪರಂಬು ಪೈಸಾರಿಗೆ 3 ಕಿ.ಮೀ. ಅಂತರವಿದ್ದು, ಈ ರಸ್ತೆಯಲ್ಲಿ ಮರಳು ಸಾಗಿಸುವ ಲಾರಿಗಳು ನಿರಂತರವಾಗಿ ಓಡಾಡುತ್ತಿರುವುದರಿಂದ ಕಳೆದ ಸಾಲಿನಲ್ಲಿ ಜಲಾವೃತಗೊಂಡಿದ್ದ ಸುಮಾರು 13 ಮನೆಗಳು ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿವೆ. ಇಲ್ಲಿ ಒಂದು ಅಂಗನವಾಡಿಯೂ ಇದ್ದು, ಇದರ ಪಕ್ಕದಲ್ಲೇ ದಿನಂಪ್ರತಿ 10-20 ಮರಳು ಲಾರಿಗಳು ಓಡಾಡುತ್ತಿರುವುದರಿಂದ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದೂ ಅವರು ದೂರಿದರು.
ರಸ್ತೆಯಲ್ಲಿ ಮರಳು ಲಾರಿಗಳ ಸಂಚಾರಕ್ಕೆ ಅವಕಾಶವಿಲ್ಲದಿದ್ದರೂ, ಅಧಿಕಾರಿಗಳ ಭ್ರಷ್ಟಾಚಾರದಿಂದಾಗಿ ಮರಳು ಗುತ್ತಿಗೆದಾರರು ಇದೇ ರಸ್ತೆಯಲ್ಲಿ ಭಾರೀ ವಾಹನಗಳಲ್ಲಿ ಮರಳು ಸಾಗಿಸುತ್ತಿದ್ದು, ರಸ್ತೆ ಸಂಪೂರ್ಣವಾಗಿ ಗುಂಡಿ ಬಿದ್ದಿದೆ. ಇದರಿಂದಾಗಿ ಪೈಸಾರಿಯಲ್ಲಿರುವ ಸುಮಾರು 200ಕ್ಕೂ ಅಧಿಕ ಶಾಲಾ ಮಕ್ಕಳನ್ನು ಕರೆದೊಯ್ಯಲು ಬರುತ್ತಿದ್ದ ಶಾಲಾ ವಾಹನಗಳು ಬರದಂತಾಗಿದೆ ಎಂದು ವಿವರಿಸಿದರು.
ಮರಳು ಗಣಿಗಾರಿಕೆಯೂ ಕಾನೂನು ಬಾಹಿರವಾಗಿ ನಡೆಯುತ್ತಿದೆ. ಕಾನೂನಿನ ಅನ್ವಯ ಕೇವಲ ಒಂದು ಮೀಟರ್ ಆಳದಿಂದ ಮಾತ್ರ ಮರಳು ತೆಗೆಯಬೇಕಿದ್ದರೂ, ಮರಳು ದಂಧೆಕೋರರು ಸುಮಾರು ಕಬ್ಬಿಣದ ದೋಣಿ ಹಾಗೂ ಕಬ್ಬಿಣದ ರಿಂಗ್ ಬಳಸಿ ಸುಮಾರು 20 ಅಡಿಗಳ ಆಳದಿಂದ ಮರಳು ತೆಗೆಯುತ್ತಿದ್ದಾರೆ. ಇದರಿಂದಾಗಿ ನದಿ ಆಳವಾಗಿ ಎರಡೂ ದಡಗಳು ಕುಸಿಯಲಾರಂಭಿಸಿದ್ದು,ದಡದಲ್ಲಿರುವ ಮನೆಗಳು ಆಪಾಯಕ್ಕೆ ಸಿಲುಕಿವೆ ಎಂದು ತಿಳಿಸಿದರು.
ಈ ಹಿಂದೆ ಮರಳು ಗಣಿಗಾರಿಕೆ ಮಾಡದಂತೆ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರವಾನಿಸಿದ್ದರೂ ಇಲಾಖೆಯ ಅಧಿಕಾರಿಗಳು ಮರಳು ದಂಧೆಕೋರರೊಂದಿಗೆ ಶಾಮೀಲಾಗಿ ಯಾವುದೇ ಕ್ರಮ ಕೈಗೊಳ್ಳದೆ ಮತ್ತೆ ಪರವಾನಗಿ ನೀಡಿದ್ದಾರೆ ಎಂದು ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಅನಾಹುತ ಸಂಭವಿಸುವ ಮುನ್ನ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಂಡು ಪೈಸಾರಿ ನಿವಾಸಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. ತಪ್ಪಿದಲ್ಲಿ ಪೈಸಾರಿ ನಿವಾಸಿಗಳು ಮುಂದಿನ ದಿನಗಳಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಿರುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಬಿ.ಕೆ.ಉಮೇಶ್, ಎಂ.ಎಸ್. ಯೋಗೀಶ್, ಕೆ.ಎಸ್.ರಮೇಶ್ ಹಾಗೂ ಕೆ.ಎಂ. ಅಜಿತ್ ಉಪಸ್ಥಿತರಿದ್ದರು.