ಪಿಎಫ್ ಹಣ ನೀಡದ ವಿರಾಜಪೇಟೆ ಪ.ಪಂ : ದಿನಗೂಲಿ ನೌಕರನ ಆರೋಪ

19/05/2020

ಮಡಿಕೇರಿ ಮೇ 19 : ಕಳೆದ ಇಪ್ಪತ್ತು ವರ್ಷಗಳಿಂದ ವಿರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ದಿನಗೂಲಿ ನೌಕರನಾಗಿ ದುಡಿಯುತ್ತಿರುವ ನನಗೆ ಅಧಿಕಾರಿಗಳು ಪಿಎಫ್ ಹಣ ನೀಡದೆ ಸತಾಯಿಸುತ್ತಿದ್ದಾರೆ ಎಂದು ನೌಕರ ಸನ್ನು ಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ತಿಂಗಳು ನನ್ನ ವೇತನದಲ್ಲಿ ಪಿಎಫ್ ಹಣವನ್ನು ಕಡಿತಗೊಳಿಸಲಾಗುತ್ತಿದೆ. ಆದರೆ ಮಡಿಕೇರಿಯಲ್ಲಿರುವ ಪಿಎಫ್ ಕಚೇರಿಗೆ ಬಂದು ವಿಚಾರಿಸಿದಾಗ ಪಿಎಫ್ ಖಾತೆಗೆ ಹಣವೇ ಜಮಾ ಆಗದಿರುವ ಬಗ್ಗೆ ಮಾಹಿತಿ ದೊರೆತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನ್ಯಾಯ ನೀಡುವಂತೆ ಪ.ಪಂ ಅಧಿಕಾರಿಗಳ ಬಳಿ ಕೇಳಿದಾಗ ದಿನಗೂಲಿ ನೌಕರನಾಗಿದ್ದರೂ ನನ್ನನ್ನು ಸೋಮವಾರಪೇಟೆ ಪ.ಪಂ ಗೆ ವರ್ಗಾವಣೆ ಮಾಡಿದ್ದಾರೆ. ಅಲ್ಲದೆ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ನನಗೆ ಸಿಗುತ್ತಿರುವ ಕೇವಲ ಏಳು ಸಾವಿರ ರೂ.ಸಂಬಳದಲ್ಲಿ ಸೋಮವಾರಪೇಟೆಗೆ ಹೋಗಿ ಬರಲು ಸಾಧ್ಯವಿಲ್ಲ, ಅಲ್ಲದೆ ವಯಸ್ಸಾದ ತಾಯಿ ಕೂಡ ಇದ್ದಾರೆ ಎಂದು ಸನ್ನು ಕುಮಾರ್ ಅಸಹಾಯಕತೆ ವ್ಯಕ್ತಪಡಿಸಿದರು.
ವರ್ಗಾವಣೆಯನ್ನು ರದ್ದು ಮಾಡಬೇಕು ಮತ್ತು ಪಿಎಫ್ ಹಣವನ್ನು ದೊರಕಿಸಿಕೊಡಬೇಕೆಂದು ಒತ್ತಾಯಿಸಿದ ಅವರು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದರು.