ಗರ್ಭಿಣಿ ಸಾವಿನಲ್ಲಿ ಸಂಶಯದ ಅಂಶಗಳಿಲ್ಲ : ಎಸ್‍ಪಿ ಡಾ.ಸುಮನ್ ಸ್ಪಷ್ಟನೆ

19/05/2020

ಮಡಿಕೇರಿ ಮೇ 19 : ಮಡಿಕೇರಿಯ ಮಹದೇವಪೇಟೆಯಲ್ಲಿ ಇತ್ತೀಚೆಗೆ ನಡೆದ ಭಾಗ್ಯಶ್ರೀ ಎನ್ನುವ ಗರ್ಭಿಣಿಯ ಸಾವಿನ ಪ್ರಕರಣದಲ್ಲಿ ಸಂಶಯದ ಯಾವುದೇ ಅಂಶಗಳು ಗೋಚರಿಸಿಲ್ಲವೆಂದು ಎಸ್‍ಪಿ ಡಾ. ಸುಮನ್ ಡಿ. ಪನ್ನೇಕರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಭಾಗ್ಯಶ್ರೀ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಲು ಸಾಧ್ಯವಿಲ್ಲವೆಂದು ಆಕೆಯ ತಾಯಿ ಸಂಶಯಗಳನ್ನು ವ್ಯಕ್ತಪಡಿಸಿದ್ದರು. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿದಾಗ ಸಂಶಯಕ್ಕೆ ಎಡೆಮಾಡಿಕೊಡಬಹುದಾದ ಅಂಶಗಳು ಕಂಡು ಬಂದಿಲ್ಲವೆಂದು ತಿಳಿಸಿದರು.
ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆ ನೇಣು ಬಿಗಿದು ಸಾವನ್ನಪ್ಪಿರುವುದಾಗಿ ಮಾಹಿತಿ ದೊರಕಿದೆ. ಇದರೊಂದಿಗೆ ಮಹಿಳೆ ಸಾವಿಗೀಡಾದ ಸ್ಥಳದ ಆಸುಪಾಸಿನ ಸಿಸಿ ಟಿವಿಗಳನ್ನು ಪರಿಶೀಲಿಸಿದಾಗ ಸಂಶಯಕ್ಕೆ ಎಡೆಮಾಡಿಕೊಡುವ ಯಾವುದೇ ಚಟುವಟಿಕೆ ಕಂಡು ಬಂದಿಲ್ಲ. ಹೀಗಿದ್ದೂ ಸಾವಿಗೀಡಾದ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಎನ್ನುವ ಕಾರಣಗಳ ಹಿನ್ನೆಲೆ ಆಕೆಯ ಗಂಡ ಶಾಹುಲ್ ಹಮೀದ್‍ನನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.