ಪಟ್ಟಾ ಕೃಷಿ ಜಮೀನು ಮರಳು ವಿಲೇವಾರಿಗೆ ಅವಕಾಶ

19/05/2020

ಮಡಿಕೇರಿ ಮೇ 19 : 2019-20 ಸಾಲಿನಲ್ಲಿ ರಾಜ್ಯದಲ್ಲಿ ಉಂಟಾದ ಭಾರಿ ಮಳೆಯಿಂದಾಗಿ ನದಿಗಳಲ್ಲಿ ಪ್ರವಾಹ ಉಂಟಾಗಿ ನದಿ ಪಾತ್ರದ ಹಲವು ಕಡೆ ಕೃಷಿ ಜಮೀನುಗಳಲ್ಲಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಮರಳು ಸಂಗ್ರಹವಾಗಿದೆ.
ಈ ಜಮೀನನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಲು ಮರಳನ್ನು ತೆರವುಗೊಳಿಸುವ ಅವಶ್ಯಕತೆ ಇದೆ. ಆದ್ದರಿಂದ ಪ್ರವಾಹದಿಂದ ಕೃಷಿ ಜಮೀನುಗಳಲ್ಲಿ ಸಂಗ್ರಹವಾಗಿರುವ ಮರಳನ್ನು ಜೂನ್ 15 ರ ರವರೆಗೆ ವಿಲೇವಾರಿ ಮಾಡಲು ಪಟ್ಟಾ ಜಮೀನುಗಳ ಮಾಲೀಕರುಗಳಿಗೆ ಅನುಮತಿ ನೀಡಲು ಸರ್ಕಾರದ ಆದೇಶವಿದೆ.
ಪಟ್ಟಾ ಜಮೀನಿನಲ್ಲಿ ಶೇಖರಣೆಗೊಂಡಿರುವ ಮರಳು ನಿಕ್ಷೇಪದ ಛಾಯ ಚಿತ್ರ, ಆರ್‍ಟಿಸಿ ಹಾಗೂ ಜಮೀನು ಮಾಲೀಕರ ಭಾವಚಿತ್ರದೊಂದಿಗೆ ಜಮೀನಿನ ಮಾಲೀಕರುಗಳು ಹಿರಿಯ ಭೂವಿಜ್ಞಾನಿಗಳ ಕಚೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಡಿಕೇರಿ ಇವರಿಗೆ ಮರಳು ಸಾಗಾಣಿಕೆ ಪರವಾನಿಗೆಗೆ ಮೇ 30 ರೊಳಗೆ ಮನವಿ ಸಲ್ಲಿಸಬೇಕು. ನಂತರ ಬಂದ ಮನವಿಯನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂ:08272-228523 ಯನ್ನು ಸಂಪರ್ಕಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಬಿ.ರೇಷ್ಮಾ ತಿಳಿಸಿದ್ದಾರೆ.