ಹಾಡಿ ಕುಟುಂಬಗಳಿಗೆ ದಲಿತ ಸಂಘರ್ಷ ಸಮಿತಿಯಿಂದ ಕಿಟ್ ವಿತರಣೆ

21/05/2020

ಮಡಿಕೇರಿ ಮೇ 21 : ಕುಶಾಲನಗರದ ತ್ಯಾಗತ್ತೂರು ಗಿರಿಜನ ಹಾಡಿಯ 40 ಕುಟುಂಬಗಳಿಗೆ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು.
ಕಿಟ್ ಹಂಚಿಕೆ ಮಾಡಿ ಮಾತನಾಡಿದ ಸ್ತ್ರೀ ರೋಗ ತಜ್ಞರಾದ ಡಾ.ಸೌಮ್ಯ ಪ್ರಕಾಶ್, ಕೊರೋನಾ ಸೋಂಕು ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ವಿವರಿಸಿದರು. ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಎಲ್.ಐ.ಸಿ.ಯ ಅಭಿವೃದ್ಧಿ ಅಧಿಕಾರಿ ಸೋಮೇಶ್ ಅವರು ಮಾತನಾಡಿ, ದಲಿತ ಸಂಘರ್ಷ ಸಮಿತಿ ಹಲವಾರು ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ. ಈ ಸಂಘಟನೆ ಇತರರಿಗೆ ಮಾದರಿಯಾಗಿದ್ದು, ಪ್ರತಿಯೊಬ್ಬರು ಬಡವರ ನೋವಿಗೆ ಸ್ಪಂದಿಸಬೇಕೆಂದು ಮನವಿ ಮಾಡಿದರು.
ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಮಾತನಾಡಿ, ಹಾಡಿಗಳಲ್ಲಿ ವಾಸಿಸುತ್ತಿರುವ ದಲಿತರು ಹಲವು ವರ್ಷಗಳಿಂದ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಶೈಕ್ಷಣಿಕವಾಗಿ ಹಿಂದುಳಿದಿರುವುದು ಬೇಸರದ ವಿಚಾರವೆಂದರು. ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಂತೆ ಸಲಹೆ ನೀಡಿದ ಅವರು ಕಡು ಬಡತನದಲ್ಲಿರುವವರು ಸಮಿತಿಯ ಗಮನ ಸೆಳೆದರೆ ಸಮಿತಿ ವತಿಯಿಂದ ವಿದ್ಯಾಭ್ಯಸಕ್ಕೆ ಅಗತ್ಯವಿರುವ ಪುಸ್ತಕ ಹಾಗೂ ಧನ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಉನ್ನತ ವ್ಯಾಸಾಂಗಕ್ಕೆ ಅಗತ್ಯವಿರುವ ತರಬೇತಿ ಮತ್ತು ಸಲಹೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು.
ದಲಿತರು ಹಾಗೂ ದುರ್ಬಲರು ಹೆಚ್ಚು ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ ಸಮಾಜದಲ್ಲಿನ ಭೇದಭಾವ ದೂರವಾಗುತ್ತದೆ. ಬಡ ಜನರ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದು ದಿವಾಕರ್ ಅಭಿಪ್ರಾಯಪಟ್ಟರು.
ಸಮಿತಿಯ ಮಡಿಕೇರಿ ತಾಲ್ಲೂಕು ಸಂಚಾಲಕ ಎ.ಪಿ.ದೀಪಕ್ ಮಾತನಾಡಿ, ಯುವಕರು ಒಗ್ಗಟ್ಟಾಗಿ ಕೆಲಸ ಕಾರ್ಯಗಳನ್ನು ಮಾಡಬೇಕು, ಸಮಿತಿ ವತಿಯಿಂದ ಪ್ರತಿ ತಿಂಗಳು ಹಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದರು. ಸರ್ಕಾರದಿಂದ ದೊರಕುವ ಮೂಲಭೂತ ಸೌಕರ್ಯಗಳನ್ನು ಹೋರಾಟದ ಮೂಲಕ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಪಿ.ಶಿವಕುಮಾರ್ ಹಾಜರಿದ್ದರು.