ಬೃಹತ್ ಗಾಂಜಾ ಜಾಲ ಪತ್ತೆ : 12 ಮಂದಿಯ ಬಂಧನ : ಲಕ್ಷಾಂತರ ರೂ. ಮೌಲ್ಯದ ಮಾಲು ವಶ

21/05/2020

ಮಡಿಕೇರಿ ಮೇ 20 : ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಭೇದಿಸಿರುವ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳವು, ಈ ಸಂಬಂಧ 12 ಮಂದಿಯನ್ನು ವೀರಾಜಪೇಟೆಯಲ್ಲಿ ಬಂಧಿಸಿ, 9 ಕೆ.ಜಿ.ಗೂ ಹೆಚ್ಚಿನ ಗಾಂಜಾವನ್ನು ವಶಪಡಿಸಿಕೊಂಡಿದೆ.
ವೀರಾಜಪೇಟೆ ನಗರದ ಸುಂಕದ ಕಟ್ಟೆಯ ನಿಸಾರ್ ಅಹಮ್ಮದ್, ಬಂಗಾಳ ಬೀದಿಯ ಎ.ಎಸ್. ಸಾದಿಕ್, ಮಡಿಕೇರಿ ಜಿಲ್ಲಾ ಕ್ರೀಡಾಂಗಣ ಬಳಿಯ ನಿವಾಸಿಗಳಾದ ಬೌತೇಶ್ ಡಿಸೋಜ, ಎಂ.ಹೆಚ್. ರಫೀಕ್, ಹಾಕತ್ತೂರು ತೊಂಬತ್ತುಮ£ಯ ಕರಣ್ ಕುಮಾರ್, ಮಡಿಕೇರಿ ತ್ಯಾಗರಾಜ ಕಾಲೋನಿಯ ಆರೀಸ್, ವೀರಾಜಪೇಟೆ ಸುಣ್ಣದ ಬೀದಿ ನಿವಾಸಿ ಸಾಯಿ ಲಾಲ್, ವೀರಾಜಪೇಟೆ ಮೊಗರಗಲ್ಲಿಯ ರಿಜ್ವಾನ್, ಮಡಿಕೇರಿ ಆಜಾದ್ ನಗರದ ಮೊಹಮ್ಮದ್ ಹ್ಯಾರಿಸ್, ಮಡಿಕೇರಿ ಉಕ್ಕುಡ ಕರ್ಣಂಗೇರಿಯ ಸಿ.ಟಿ. ದಿನೇಶ್, ಮಡಿಕೇರಿ ಎಫ್‍ಎಂಕೆಎಂಸಿಯ ಕಾಲೇಜು ಬಳಿಯ ನಿವಾಸಿ ಎನ್. ಪಿ. ಅಯ್ಯಪ್ಪ ಮತ್ತು ಮಡಿಕೇರಿ ಚೈನ್ ಗೇಟ್ ಬಳಿಯ ನಿವಾಸಿ ಮಿಲನ್ ಎಂ.ಜಿ. ಎಂಬವರೆ ಬಂಧಿತ ಆರೋಪಿಗಳು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಅವರು ತಮ್ಮ ಕಛೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ ಬಂಧಿತ ಆರೋಪಿಗಳಿಂದ ಅಂದಾಜು 3 ಲಕ್ಷ ಮೌಲ್ಯದ 9.322 ಕೆ.ಜಿ. ಗಾಂಜಾ, 1,99,670 ರೂ. ನಗದು, 11 ಮೊಬೈಲ್ , ಅಂದಾಜು 26 ಲಕ್ಷ ರೂ. ಮೌಲ್ಯದ 5 ನಾಲ್ಕು ಚಕ್ರದ ವಾಹನಗಳು, ಒಂದು ಆಟೋ ರಿಕ್ಷಾ, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದರು.
::: ಖಚಿತ ಸುಳಿವು :::
ವೀರಾಜಪೇಟೆಯ ಸುಂಕದ ಕಟ್ಟೆ ಮೈದಾನದಲ್ಲಿ ಮಂಗಳವಾರ ಗಾಂಜಾ ಮಾರಾಟ ಜಾಲದ ಪ್ರಮುಖ ವ್ಯಕ್ತಿ ನಿಸಾರ್ ಅಹಮ್ಮದ್ ಮತ್ತು ಸಾದಿಕ್ ಅವರು ಸ್ಥಳೀಯವಾಗಿ ಗಾಂಜಾ ಮಾರಾಟ ಮಾಡುವ 10 ಮಂದಿಗೆ ಗಾಂಜಾ ಹಂಚುತ್ತಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಡಿಸಿಐಬಿ ತಂಡ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿರುವುದಾಗಿ ಎಸ್‍ಪಿ ಸುಮನ್ ಪನ್ನೇಕರ್ ತಿಳಿಸಿದರು.
ಕೊರೊನಾ ಲಾಕ್ ಡೌನ್ ಹಂತದಲ್ಲಿ ಮೆಡಿಕಲ್ ಎಮರ್ಜೆನ್ಸಿ ಪಾಸ್‍ನ್ನು ಆನ್ ಲೈನ್ ಮೂಲಕ ಪಡೆದುಕೊಂಡು ಗಾಂಜಾವನ್ನು ಜಿಲ್ಲೆಗೆ ತಂದು ಮಾರಾಟ ಮಾಡುವ ದಂಧೆಯಲ್ಲಿ ಈ ತಂಡ ತೊಡಗಿತ್ತು. ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಗಾಂಜಾ ಮಾರಾಟ ಜಾಲವನ್ನು ಅತ್ಯಂತ ಯಶಸ್ವಿಯಾಗಿ ಭೇದಿಸಲಾಗಿದ್ದು, ಇವರಿಗೆ ಹೊರಗಿನಿಂದ ಗಾಂಜಾ ಪೂರೈಕೆಯಾಗುತ್ತಿದ್ದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿರುವುದಾಗಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ನಿರ್ದೇಶನದಂತೆ, ವೀರಾಜಪೇಟೆ ತಹಸೀಲ್ದಾರ್ ನಂದೀಶ್ ಅವರ ಸಮಕ್ಷಮದಲ್ಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಪೊಲೀಸ್ ಉಪ ಅಧೀಕ್ಷಕರಾದ ಸಿ.ಟಿ. ಜಯ ಕುಮಾರ್, ವೀರಾಜಪೆÉೀಟೆ ಸಿಐ ಕ್ಯಾತೇಗೌಡ, ಡಿಸಿಐಬಿ ಪ್ರಬಾರ ನಿರೀಕ್ಷಕ ಹೆಚ್.ವಿ. ಚಂದ್ರಶೇಖರ್, ಉಪ ನಿರೀಕ್ಷಕರುಗಳಾದ ಮರಿ ಸ್ವಾಮಿ, ಬೋಜಪ್ಪ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.