ಲಾಕ್ ಡೌನ್ ಸಡಿಲಿಕೆ : ಜೆಡಿಎಸ್ ಅಸಮಾಧಾನ

21/05/2020

ಮಡಿಕೇರಿ ಮೇ 20 : ಕೊರೋನಾ ಮಾರಕ ಸೋಂಕಿನ ತಡೆಗೆ ರಾಜ್ಯವ್ಯಾಪಿ ಜಾರಿಯಲ್ಲಿದ್ದ ಲಾಕ್‍ಡೌನ್ ನ್ನು ಸಡಿಲಗೊಳಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಘಟಕ, ಇದು ದುರುದ್ದೇಶಪೂರಿತ ಕ್ರಮವೆಂದು ಟೀಕಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಇಸಾಕ್ ಖಾನ್ ಅವರು, ಕೊರೊನಾ ಲಾಕ್‍ಡೌನ್ ನಿರ್ಬಂಧಗಳನ್ನು ಅಲ್ಪಸಂಖ್ಯಾತ ಸಮುದಾಯ ಹಿಂದಿನಿಂದಲೂ ಕಟ್ಟು ನಿಟ್ಟಾಗಿ ಪಾಲಿಸಿಕೊಂಡು ಬಂದಿದೆ. ಆದರೆ, ಇದೀಗ ರಾಜ್ಯ ಸರ್ಕಾರವೆ ಅಂಗಡಿ ಮುಂಗಟ್ಟುಗಳು, ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡುವುದರೊಂದಿಗೆ ಬಸ್, ಆಟೋ, ಟ್ಯಾಕ್ಸಿ ಸಂಚಾರಕ್ಕೂ ಅನುವು ಮಾಡಿಕೊಟ್ಟಿದೆ. ಇಷ್ಟೆಲ್ಲ ಮಾಡಿದ ಸರ್ಕಾರ ಕೇವಲ ಧಾರ್ಮಿಕ ಕೇಂದ್ರಗಳಿಗೆ ತೆರಳದಂತೆ ನಿರ್ಬಂಧ ವಿಧಿಸಿರುವುದು ಮಾತ್ರ ವಿಷಾದನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತೀಯ ಸಂಸ್ಕøತಿಯಲ್ಲಿ ಯಾವುದೇ ಸಂಕಷ್ಟಗಳು ಬಂದಾಗ ಅದರ ಪರಿಹಾರಕ್ಕೆ ಎಲ್ಲಾ ಸಮುದಾಯದವರು ಅವರವರ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ, ದೇವರ ಮೊರೆ ಹೋಗುವುದು ಸಂಪ್ರದಾಯವಾಗಿದೆ. ಆದರೆ, ಸರ್ಕಾರ ಇತರ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಿ, ಕೇವಲ ಧಾರ್ಮಿಕ ಕೇಂದ್ರಗಳಿಗೆ ತೆರಳದಂತೆ, ಪ್ರಾರ್ಥನೆ ಪೂಜೆ ಸಲ್ಲಿಸದಂತೆ ನಿರ್ಬಂಧ ಹೇರಿರುವುದು ಸರಿಯಯಾದ ಕ್ರಮವಲ್ಲವೆಂದು ಅಭಿಪ್ರಾಯಿಸಿದರು.
ಈ ನಡುವೆ ವಾರದ ಎಲ್ಲಾ ದಿನಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಿರುವ ರಾಜ್ಯ ಸರ್ಕಾರ ಭಾನುವಾರದಂದು ಮಾತ್ರ ಸಂಪುರ್ಣ ಲಾಕ್ ಡೌನ್ ಮಾಡಿರುವುದು ದುರುದ್ದೇಶಪೂರಿತ. ಮೇ ಅಂತ್ಯದವರೆಗೆ ಕೇವಲ ಎರಡು ಭಾನುವಾರಗಳು ಮಾತ್ರ ಇದ್ದು, ಈ ಎರಡು ದಿನಗಳಲ್ಲಿ ಲಾಕ್ ಡೌನ್ ಮಾಡುವುದರಿಂದ ಸರ್ಕಾರ ಏನನ್ನು ಸಾಧಿಸಲು ಹೊರಟಿದೆ ಎಂದು ಪ್ರಶ್ನಿಸಿದರಲ್ಲದೆ, ಇದರಲ್ಲಿ ಮೇ24 ರ ಭಾನುವಾರ ರಂಜಾನ್ ಹಬ್ಬಾಚರಣೆÉ ಬರುತ್ತದೆ. ಆದರೆ, ಈ ಹಬ್ಬಾಚರಣೆಯನ್ನು ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾನೂನು ಮೀರದಂತೆ ಆಚರಿಸುವಂತೆ ನಾವು ಮುಸ್ಲಿಂ ಸಮುದಾಯಕ್ಕೆ ಕರೆ ನೀಡುತ್ತಿದ್ದೇವೆ. ಹೀಗಿದ್ದೂ ಈ ಭಾನುವಾರಗಳಂದು ಸಂಪೂರ್ಣ ಲಾಕ್ ಡೌನ್ ಮಾಡಿರುವುದು ರಾಜ್ಯದ ಬಿಜೆಪಿ ಸರ್ಕಾರದ ತಾರತಮ್ಯದ ಧೋರಣೆಯಾಗಿದೆಯೆಂದು ಟೀಕಿಸಿದರು.
::: ಕಠಿಣ ಕ್ರಮವಾಗಲಿ :::
ರಂಜಾನ್ ಹಬ್ಬಾಚರಣೆಯ ಸಂಬಂಧ ಹಿಂದೂಗಳ ಮಳಿಗೆಗಳಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದೆಂದು ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಸಂದೇಶ ರವಾನಿಸಿದ್ದು. ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಇಸಾಕ್ ಖಾನ್, ಇಂತಹ ಯಾವುದೇ ತೀರ್ಮಾನವನ್ನು ಸಮುದಾಯ ಕೈಗೊಂಡಿಲ್ಲವೆಂದು ಸ್ಪಷ್ಟಪಡಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ರಂಜಾನ್ ಹಬ್ಬವನ್ನು ಸರಳವಾಗಿ ಯಾವುದೇ ದುಂದು ವೆಚ್ಚಕ್ಕೆ ಅವಕಾಶವಿಲ್ಲದಂತೆ ಆಚರಿಸಲು ಕರೆ ನೀಡಲಾಗಿತ್ತು. ಇದನ್ನೇ ಕೆಲವು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಸಾಮರಸ್ಯ ಕದಡಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಆಲಿ ಮಾತನಾಡಿ, ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ರಂಜಾನ್‍ನ್ನು ಕಾನೂನಿಗೆ ತೊಡಕುಂಟಾಗದಂತೆ ಆಚರಿಸಬೇಕೆಂದು ಕರೆ ನೀಡಿದರಲ್ಲದೆ, ಕೊರೊನಾವನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯಾವುದೇ ರಾಜಕೀಯ ಲಾಭವನ್ನು ನಿರೀಕ್ಷಿಸದೆ ಎಲ್ಲಾ ಪಕ್ಷಗಳ ಸಹಕಾರ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ, ಮಡಿಕೇರಿ ನಗರಾಧ್ಯಕ್ಷ ಖಲೀಲ್ ಹಾಗೂ ಜೆಡಿಎಸ್ ಯುವ ಘಟಕದ ಜಿಲ್ಲಾ ಕಾರ್ಯದರ್ಶಿ ಜಾಶಿರ್ ಉಪಸ್ಥಿತರಿದ್ದರು.