ರಂಜಾನ್ ಹಬ್ಬವನ್ನು ಮನೆಯಲ್ಲೇ ಸರಳವಾಗಿ ಆಚರಿಸಲು ಮನವಿ

21/05/2020

ಮಡಿಕೇರಿ ಮೇ 21 : ಈದ್-ಉಲ್-ಫಿತರ್ (ರಂಜಾನ್) ನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮನೆಯಲ್ಲೇ ಅತ್ಯಂತ ಸರಳ ರೀತಿಯಲ್ಲಿ ಆಚರಿಸುವಂತೆ ರಾಜ್ಯ ವಕ್ಫ್ ಮಂಡಳಿ ಆದೇಶಿಸಿರುವುದರಿಂದ ಕೊಡಗಿನ ಮುಸಲ್ಮಾನ ಬಾಂಧವರು ಈ ಆದೇಶವನ್ನು ಪಾಲಿಸಿ ಸಹಕರಿಸುವಂತೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ.ಯಾಕುಬ್ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರ್ಕಾರವು ಕೊರೋನಾ ಲಾಕ್ ಡೌನ್ ನ್ನು ಮೇ 31 ರವರೆಗೆ ಮುಂದುವರೆಸಿರುವುದರಿಂದ ಜಿಲ್ಲಾಡಳಿತದ ಸೂಚನೆಯನ್ನು ಪ್ರತಿಯೊಬ್ಬರು ಪಾಲಿಸಿಕೊಂಡು ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕೆಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಇದ್ದರೂ ಷರತ್ತುಗಳನ್ನು ವಿಧಿಸಲಾಗಿದೆ. ಅಲ್ಲದೆ ಸರ್ಕಾರದ ಸೂಚನೆಯಂತೆ ಮೇ 24 ರಂದು ಭಾನುವಾರ ಸಂಪೂರ್ಣ ಬಂದ್ ನ ವಾತಾವರಣವಿರುತ್ತದೆ. ಆದ್ದರಿಂದ ಮುಸಲ್ಮಾನ ಬಾಂಧವರು ಮಸೀದಿ, ದರ್ಗಾ ಮತ್ತು ಈದ್ಗಾದಲ್ಲಿ ಪ್ರಾರ್ಥನೆಗೆ ಒತ್ತು ನೀಡದೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದೆ ತಾವಿರುವ ಪ್ರದೇಶದಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಕೋರಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಬೇಕೆ ಹೊರತು ಆರೋಗ್ಯದ ಹಿತದೃಷ್ಟಿಯಿಂದ ಆಲಿಂಗನ ಮತ್ತು ಹಸ್ತ ಲಾಘವ ಮಾಡಬಾರದು ಎಂದು ಸಲಹೆ ನೀಡಿದ್ದಾರೆ. ಹೊರ ಜಿಲ್ಲೆ, ರಾಜ್ಯ, ದೇಶಗಳಿಂದ ಬಂದವರ ಮೇಲೆ ನಿಗಾ ಇರಿಸಿ ಲಾಕ್ ಡೌನ್ ಆದೇಶ ಪಾಲನೆಗೆ ಸೂಚನೆ ನೀಡಬೇಕು ಎಂದು ಯಾಕುಬ್ ತಿಳಿಸಿದ್ದಾರೆ.
ಹಬ್ಬ ಆಚರಣೆಗಾಗಿ ದುಂದು ವೆಚ್ಚ ಮಾಡದೆ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿರುವ ಬಡವರಿಗೆ ಹಾಗೂ ದುರ್ಬಲರಿಗೆ ದಾನ ಮಾಡುವ ಮೂಲಕ ಹಬ್ಬವನ್ನು ಅರ್ಥಪೂರ್ಣಗೊಳಿಸಬೇಕೆಂದು ಮನವಿ ಮಾಡಿದ್ದಾರೆ. ಇದೇ ಸಂದರ್ಭ ಅವರು ನಾಡಿನ ಜನತೆಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.