ಪರಿಹಾರ ಧನಕ್ಕಾಗಿ ಚಾಲಕರ ಮನವಿ

22/05/2020

ಮಡಿಕೇರಿ ಮೇ 21 : ಕೊರೋನಾ ವೈರಸ್ ಲಾಕ್‍ಡೌನ್‍ನಿಂದಾಗಿ ಯಾವುದೇ ಆದಾಯವಿಲ್ಲದೆ ಸಂಕಷ್ಟ ಎದುರಿಸುತ್ತಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಘೋಷಿಸಿರುವ ಪರಿಹಾರ ಧನ ರೂ. ಐದು ಸಾವಿರವನ್ನು ಕೂಡಲೇ ಫಲಾನುಭವಿಗಳಿಗೆ ನೀಡುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಸೋಶಿಯಲ್ ಡೆಮಾಕ್ರೆಟಿಕ್ ಟ್ರೆಡ್ ಯೂನಿಯನ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಈ ಸಂದರ್ಭ ಮಾತನಾಡಿದ ಯೂನಿಯನ್‍ನ ಅಧ್ಯಕ್ಷ ಕೆ.ಜಿ.ಪೀಟರ್, ಲಾಕ್‍ಡೌನ್‍ನಿಂದಾಗಿ ಯಾವುದೇ ಆದಾಯವಿಲ್ಲದೆ ಸಂಕಷ್ಟ ಎದುರಿಸುತ್ತಿರುವ ಶ್ರಮಿಕ ವರ್ಗ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಐದು ಸಾವಿರ ರೂ. ಪರಿಹಾರ ಹಣ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಚಾಲಕರು ಅನಿವಾರ್ಯವಾಗಿ ಮಧ್ಯವರ್ತಿಗಳ ಮೂಲಕ ಅಂಚೆ ಕಚೇರಿ ಮತ್ತು ಇತರ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು.
ಚಾಲಕರ ಅಸಹಾಯಕ ಪರಿಸ್ಥಿತಿಯನ್ನು ಮಧ್ಯವರ್ತಿಗಳು ದುರ್ಬಳಕೆ ಮಾಡಿಕೊಂಡು ಅರ್ಜಿ ನಮೂನೆ ಭರ್ತಿ ಮಾಡುವ ನೆಪದಲ್ಲಿ ಹಣ ಪಡೆಯುತ್ತಿದ್ದು, ಇದು ಭ್ರಷ್ಟ ವ್ಯವಸ್ಥೆಗೆ ದಾರಿ ಮಾಡಿಕೊಡಲಿದೆ ಎಂದು ಆರೋಪಿಸಿದರು.
ಐದು ಸಾವಿರ ರೂ. ಪರಿಹಾರ ಧನಕ್ಕಾಗಿ ಸೂಚಿಸಿರುವ ನಿಬಂಧನೆಗಳಲ್ಲಿ ಆಟೋ ಚಾಲಕರಿಗೆ ಬ್ಯಾಡ್ಜ್ ಕಡ್ಡಾಯಗೊಳಿಸಿರುವ ಕ್ರಮವನ್ನು ಕೈಬಿಡಬೇಕು ಮತ್ತು ಎಲ್ಲಾ ಆಟೋ ಚಾಲಕರಿಗೂ ಪರಿಹಾರ ಸಿಗುವಂತೆ ಯೋಜನೆಯ ನಿಯಮಗಳಲ್ಲಿ ಬದಲಾವಣೆ ತರಬೇಕೆಂದು ಮನವಿ ಮಾಡಿದರು.
ಮನವಿ ಪತ್ರ ಸಲ್ಲಿಸುವ ಸಂದರ್ಭ ಎಸ್.ಡಿ.ಟಿ.ಯು ಜಿಲ್ಲಾ ಕಾರ್ಯದರ್ಶಿ ಮೈಕಲ್ ವೇಗಸ್, ಮಡಿಕೇರಿ ತಾಲ್ಲೂಕು ಎಸ್‍ಡಿಟಿಯು ಆಟೋ ಚಾಲಕರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.