ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಜಿಲ್ಲಾ ಕಾಂಗ್ರೆಸ್ ಒತ್ತಾಯ

ಮಡಿಕೇರಿ ಮೇ 21 : ರೈತ ಮಹಿಳೆಯನ್ನು ಅವಮಾನಿಸಿದ ಆರೋಪ ಎದುರಿಸುತ್ತಿರುವ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ತಾಳ್ಮೆಯಿಂದ ಜನರ ಅಹವಾಲುಗಳನ್ನು ಆಲಿಸಿ ಸಮಸ್ಯೆಗೆ ಸ್ಪಂದಿಸಬೇಕಾದ ಜವಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಉದ್ದಟತನದಿಂದ ವರ್ತಿಸಿರುವುದು ರಾಜ್ಯದ ರೈತರಿಗೆ ಮಾಡಿದ ಅವಮಾನವಾಗಿದೆ ಎಂದು ಆರೋಪಿಸಿದ್ದಾರೆ.
ಎಸ್.ಅಗ್ರಹಾರ ಗ್ರಾಮದ ಕೆರೆ ಪರಿಶೀಲನೆಗೆ ಹೋಗಿದ್ದ ಸಂದರ್ಭ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮಹಿಳಾ ಕಾರ್ಯಕರ್ತರು ಕೆರೆಗಳ ಒತ್ತುವರಿ ತೆರವು ಮಾಡುವಂತೆ ಮನವಿ ಸಲ್ಲಿಸಿ ಚರ್ಚೆಗೆ ಮುಂದಾದಾಗ ಮಹಿಳಾ ಕಾರ್ಯಕರ್ತರನ್ನು ಸಚಿವರು ನಿಂದಿಸಿ ಅವಮಾನಿಸಿರುವುದು ಖಂಡನೀಯವೆಂದು ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧುಸ್ವಾಮಿ ಅವರು ಸಚಿವ ಸ್ಥಾನದಲ್ಲಿ ಮುಂದುವರೆಯುವ ಅರ್ಹತೆಯನ್ನು ಕಳೆದುಕೊಂಡಿರುವುದರಿಂದ ಮುಖ್ಯಮಂತ್ರಿಗಳು ಅವರಿಂದ ತಕ್ಷಣ ರಾಜೀನಾಮೆ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.