ಪ್ರವೇಶ ಶುಲ್ಕ ಹೆಚ್ಚಿಸದಂತೆ ಶಾಲೆಗಳಿಗೆ ಸೂಚನೆ

22/05/2020

ಮಡಿಕೇರಿ ಮೇ 21 : ಶಾಲಾ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಬಂದಲ್ಲಿ ಜಿಲ್ಲಾ ಉಪ ನಿರ್ದೇಶಕರ ಹಂತದಲ್ಲಿಯೇ ಪರಿಶೀಲನಾ ತಂಡ ರಚಿಸಿ ಸಂಬಂಧಿಸಿದ ಶಾಲೆಗೆ ಭೇಟಿ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್.ಮಚ್ಚಾಡೊ ಅವರು ತಿಳಿಸಿದ್ದಾರೆ.

ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದ್ದು, ಈ ಹಿಂದೆ ಮಕ್ಕಳ ಶುಲ್ಕವನ್ನು ಪಾವತಿಸಲು ಆರ್ಥಿಕವಾಗಿ ಸಮರ್ಥರಿರುವ ಹಾಗೂ ಶುಲ್ಕವನ್ನು ಸ್ವಯಂ ಪ್ರೇರಿತವಾಗಿ ಭರಿಸಲು ಮುಂದಾಗುವ ಪೋಷಕರಿಂದ ಮಾತ್ರ ಶುಲ್ಕ ವಸೂಲಾತಿ ಮಾಡಲು ಅವಕಾಶ ನೀಡಲಾಗಿತ್ತು.
ವಿದ್ಯಾರ್ಥಿಗಳು ಮತ್ತು ಪೋಷಕರ ಆಯ್ಕೆಯಂತೆ ಶಾಲಾ ಶುಲ್ಕವನ್ನು ಪ್ರತಿ ಮಾಹೆವಾರು, ತ್ರೈಮಾಸಿಕವಾರು, ಅರ್ಧ ವಾರ್ಷಿಕವಾರು ಕಂತುಗಳ ಮೂಲಕ ಅಥವಾ ವರ್ಷದ ಶುಲ್ಕವನ್ನು ಒಂದೇ ಬಾರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ರಾಜ್ಯಾದಾದ್ಯಂತ ಲಾಕ್‍ಡೌನ್ ಇರುವುದರಿಂದ, ಪೋಷಕರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ 2020-21ನೇ ಸಾಲಿಗೆ ಖಾಸಗಿ ಶಾಲಾ ಆಡಳಿತ ಮಂಡಳಿಯವರು ಯಾವುದೇ ಶುಲ್ಕವನ್ನು ಹೆಚ್ಚಿಸದಂತೆ ಸೂಚಿಸಿದೆ. ಹಾಗೂ ಶಾಲಾ ಆಡಳಿತ ಮಂಡಳಿಯವರು ಕಳೆದ ಸಾಲಿನಲ್ಲಿ ಪಡೆದ ಶುಲ್ಕಕ್ಕಿಂತ ಕಡಿಮೆ ಶುಲ್ಕವನ್ನು ಪಡೆಯಲು ಇಚ್ಛಿಸಿದಲ್ಲಿ ಸಂಸ್ಥೆಯವರು ಸ್ವತಂತ್ರರಾಗಿರುತ್ತಾರೆ ಎಂದು ಮಚ್ಚಾಡೊ ತಿಳಿಸಿದ್ದಾರೆ.
ಶುಲ್ಕವನ್ನು ಚೆಕ್/ ಆರ್‍ಟಿಜಿಎಸ್/ನೆಪ್ಟ್ ಆನ್‍ಲೈನ್ ಮೂಲಕವೇ ಕಡ್ಡಾಯವಾಗಿ ಪಡೆಯುವುದು. ಯಾವುದೇ ಕಾರಣಕ್ಕೂ ಲಾಕ್‍ಡೌನ್ ಅವಧಿಯಲ್ಲಿ ಪೋಷಕರಾಗಲಿ, ವಿದ್ಯಾರ್ಥಿಗಳಾಗಲಿ ಶಾಲೆಯ ಆವರಣಕ್ಕೆ ಬಾರದಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ಆಡಳಿತ ಮಂಡಳಿಯವರು ಶಾಲಾ ಶುಲ್ಕವನ್ನು ಪಾವತಿಸಲು ಪೋಷಕರಿಗೆ ಇ-ಮೇಲ್, ಎಸ್‍ಎಂಎಸ್. ಅಥವಾ ವಾಟ್ಸ್‍ಆಪ್ ಮೂಲಕ ಸೂಚನೆ ನೀಡುವ ಸಮಯದಲ್ಲಿ “ಶುಲ್ಕ ಪಾವತಿಸಲು ಶಕ್ತರಿರುವ ಹಾಗೂ ಸ್ವ-ಇಚ್ಛೆಯಿಂದ ಪಾವತಿಸಲು ಇಚ್ಛಿಸುವ ಪೋಷಕರುಗಳು ಮಾತ್ರ ಪಾವತಿಸಬಹುದು. ಶುಲ್ಕ ಪಾವತಿಸಲು ಸಾಧ್ಯವಿಲ್ಲದೇ ಇರುವ ಪೋಷಕರುಗಳು ಸದ್ಯಕ್ಕೆ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ ಎನ್ನುವ ಅಂಶವನ್ನು ಕಡ್ಡಾಯವಾಗಿ ಪೋಷಕರ ಗಮನಕ್ಕೆ ತರಬೇಕು ಎಂದು ಅವರು ಹೇಳಿದ್ದಾರೆ.