ಪೂಜಾ ಪುನಸ್ಕಾರ ನೇರ ಪ್ರಸಾರ

22/05/2020

ಬೆಂಗಳೂರು ಮೇ 21 : ರಾಜ್ಯದ ಆಯ್ದ ಪ್ರಮುಖ ದೇವಸ್ಥಾನಗಳ ಪೂಜಾ ಪುನಸ್ಕಾರವನ್ನು ಆನ್‍ಲೈನ್ ಮೂಲಕ ನೇರ ಪ್ರಸಾರ ಮಾಡಲು ಚಿಂತನೆ ನಡೆದಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಯಾ ದೇವಸ್ಥಾನಗಳ ವೆಬ್‍ಸೈಟ್ ಮತ್ತು ಫೇಸ್ ಬುಕ್ ಲೈವ್ ಮೂಲಕನೇರ ಪ್ರಸಾರ ಮಾಡುವ ಚಿಂತನೆ ಇದೆ. 15 ಜಿಲ್ಲೆಗಳ ದೇಗುಲ ಪೂಜಾ ಪದ್ಧತಿಯನ್ನು ನೇರಪ್ರಸಾರ ಮಾಡುವ ಉದ್ದೇಶ ಇದೆ ಎಂದು ತಿಳಿಸಿದರು.
ಇದೇ ವೇಳೆ ಲಾಕ್‍ಡೌನ್ ಹಿನ್ನೆಲೆ ದೇವಸ್ಥಾನಗಳು ಬಂದ್ ಆಗಿರುವುದರಿಂದ ಭಕ್ತರಿಗೆ ಅನುಕೂಲವಾಗಲೆಂದು ಆನ್ ಲೈನ್ ಪೂಜೆ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದ್ದೇವೆ ಎಂದರು.
ಆಯ್ದ ದೇವಸ್ಥಾನಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗುವುದು. ಆನ್ ಲೈನ್ ಮೂಲಕ ಭಕ್ತರು ಸೇವಾ ವೆಚ್ಚ ಭರಿಸಬಹುದು. ಅವರಿಗೆ ಮನೆಗೇ ಪ್ರಸಾದ ಕಳಿಸುವ ಕೆಲಸ ಮಾಡುತ್ತೇವೆ. ಮಂಗಳಾರತಿ, ಅರ್ಚನೆ, ಪುಷ್ಪಾಲಂಕಾರ ಪೂಜೆ, ಅಷ್ಟೋತ್ತರ ಸೇರಿ 15 ಸೇವೆಗಳನ್ನು ಆನ್‍ಲೈನ್ ಮೂಲಕ ಕೊಡಲು ಉದ್ದೇಶಿಸಲಾಗಿದೆ.