ಜೂನ್ ಮೊದಲ ವಾರದಲ್ಲಿ ಮಳೆಹಾನಿ ಸಂತ್ರಸ್ತರಿಗೆ ಮನೆ ಹಸ್ತಾಂತರ : ಸಚಿವ ವಿ.ಸೋಮಣ್ಣ ಭರವಸೆ

22/05/2020

ಮಡಿಕೇರಿ ಮೇ 22 : ಜಿಲ್ಲೆಯ ಜಂಬೂರು ಮತ್ತು ಮದೆನಾಡು ಬಳಿ ಸಂತ್ರಸ್ತರಿಗೆ ನಿರ್ಮಿಸಿರುವ ಒಟ್ಟು 463 ಮನೆಗಳನ್ನು ಜೂನ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಸ್ತಾಂತರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಪ್ರಕಟಿಸಿದ್ದಾರೆ.
ನಗರದ ಜಿ.ಪಂ.ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಹಾಗೂ ಮುಂಗಾರು ಎದುರಿಸುವಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ಮಾಹಿತಿ ಪಡೆದು ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿದರು.
ಈಗಾಗಲೇ ಮೇ, 31 ರವರೆಗೆ ಲಾಕ್‍ಡೌನ್ ಮುಂದುವರೆದಿರುವುದರಿಂದ ಜೂನ್ ಮೊದಲ ವಾರದಲ್ಲಿ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂರಿಸಲು ನಿರ್ಧರಿಸಲಾಗಿದೆ ಎಂದು ವಿ.ಸೋಮಣ್ಣ ಅವರು ತಿಳಿಸಿದರು.
ಕೋವಿಡ್ ನಿಯಂತ್ರಣ ಸಂಬಂಧಿಸಿದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಆಹಾರ ಕಿಟ್ ವಿತರಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಕಟಿಸಿರುವ ಸರ್ಕಾರದ ವಿಶೇಷ ಪ್ಯಾಕೇಜ್‍ಗಳನ್ನು ತಲುಪಿಸಲಾಗುತ್ತಿದೆ ಎಂದು ವಿ.ಸೋಮಣ್ಣ ಅವರು ತಿಳಿಸಿದರು.
ಹೂವು ಬೆಳೆಗಾರರಿಗೆ, ಸವಿತಾ ಸಮಾಜದವರಿಗೆ, ಮಡಿವಾಳ ಸಮಾಜದವರಿಗೆ ಹೀಗೆ ಹಲವು ಸಣ್ಣ ಉದ್ಯಮಗಳು ಹಾಗೂ ವ್ಯಾಪಾರಸ್ಥರಿಗೆ ವಿಶೇಷ ಪ್ಯಾಕೇಜ್‍ಗಳನ್ನು ಸರ್ಕಾರ ಪ್ರಕಟಿಸಿದ್ದು, ಸರ್ಕಾರದ ವಿಶೇಷ ಪ್ಯಾಕೇಜ್‍ಗಳನ್ನು ತಲುಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಕೃಷಿಕರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ಸೇರಿದಂತೆ ಸರ್ಕಾರದ ಹತ್ತು ಹಲವು ಕಾರ್ಯಕ್ರಮಗಳು ಹಾಗೂ ವಿಶೇಷ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ಸಚಿವರು ನುಡಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಅಂತರ ರಾಜ್ಯ ಹಾಗೂ ಅಂತರ ರಾಷ್ಟ್ರದಿಂದ ಜಿಲ್ಲೆಗೆ ಆಗಮಿಸುವವರನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು ಎಂದು ಪೊಲೀಸ್ ಇಲಾಖೆಗೆ ಸಲಹೆ ಮಾಡಿದರು.
ಹೊರ ಜಿಲ್ಲೆಯಿಂದ ಮೀನು ಮತ್ತು ಹಂದಿ ಮಾಂಸವನ್ನು ತರಲು ಅವಕಾಶವಿದ್ದು, ಮುಂದಿನ ದಿನಗಳಲ್ಲಿ ಮೀನು ಮತ್ತು ಹಂದಿ ಮಾಂಸ ಹೊರ ಜಿಲ್ಲೆಗಳಿಂದ ಬರಲಿದೆ. ತರಕಾರಿಯನ್ನು ಟೆಂಪೋ ಅಥವಾ ಗೂಡ್ಸ್ ವಾಹನದಲ್ಲಿ ತರುವಾಗ ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಕೆ.ಜಿ.ಬೋಪಯ್ಯ ಅವರು ಸೂಚಿಸಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಕೋವಿಡ್ ನಿಯಂತ್ರಿಸಲು ಪ್ರತಿಯೊಬ್ಬರೂ ತಪಾಸಣೆ ಮಾಡಿಸಿಕೊಳ್ಳಬೇಕಿದೆ. ಇದರಲ್ಲಿ ಯಾವುದೇ ರೀತಿಯ ಮುಜುಗರ ಪಡುವ ಅಗತ್ಯವಿಲ್ಲ ಎಂದರು.
ಸರ್ಕಾರ ಕೃಷಿಕರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ನೀಡಲು ಪ್ರಕಟಿಸಿದ್ದು, ಬಡವರನ್ನು ಮೇಲೆತ್ತಲು ಹಲವು ವಿಶೇಷ ಪ್ಯಾಕೇಜ್‍ಗಳನ್ನು ಸರ್ಕಾರ ಘೋಷಿಸಿದೆ ಎಂದು ಅವರು ಹೇಳಿದರು.
ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಕೋವಿಡ್ ನಿಯಂತ್ರಣ ಮಾಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಹಗಲಿರುಳು ಶ್ರಮಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಹರಡುವ ಸಂದರ್ಭದಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ಅವರ ಪಾತ್ರ ಮಹತ್ತರವಾಗಿದೆ ಎಂದು ಕೊಂಡಾಡಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಮಾತನಾಡಿ ಪಿಯು ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡಲು ಮಂಗಳೂರಿಗೆ ತೆರಳುವ ಜಿಲ್ಲೆಯ ಉಪನ್ಯಾಸಕರಿಗೆ ಸಾರಿಗೆ ಮತ್ತು ವಸತಿ ಸೌಲಭ್ಯ ಕಲ್ಪಿಸುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ಕಳೆದ ಎರಡು ವರ್ಷದಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಹಟ್ಟಿಹೊಳೆ, ಹಮ್ಮಿಯಾಲ ಭಾಗದಲ್ಲಿ ಗದ್ದೆಗಳಲ್ಲಿ ಮರಗಳು ಹೂತು ಹೋಗಿದ್ದು, ಈ ಮರಗಳನ್ನು ತೆರವುಗೊಳಿಸಬೇಕೆಂದು ಹಲವು ಬಾರಿ ಪ್ರಸ್ತಾಪಿಸುತ್ತಾ ಬರಲಾಗಿದೆ ಆದರೆ ಇದುವರೆಗೆ ಯಾವುದೇ ಕಾರ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕೂಡಲೇ ಮರಗಳನ್ನು ತೆರವುಗೊಳಿಸದಿದ್ದಲ್ಲಿ ಧರಣಿ ಕೂರುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ವೀಣಾ ಅಚ್ಚಯ್ಯ ಅವರು ಎಚ್ಚರಿಸಿದರು.
ಇದಕ್ಕೆ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚುರಂಜನ್ ಅವರು ಧ್ವನಿಗೂಡಿಸಿ ಕಳೆದ ಎರಡು ವರ್ಷಗಳಿಂದ ಹಲವು ಸಭೆಗಳಲ್ಲಿ ಪ್ರಸ್ತಾಪಿಸಲಾಗಿದೆ. ಆದರೂ ಯಾವುದೇ ಕಾರ್ಯವಾಗಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿ.ರಾಮ್ ಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ., ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ನಾನಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.