ಲಾಕ್‍ಡೌನ್‍ನಿಂದ ಹೋಂಸ್ಟೇಗಳಿಗೆ ನಷ್ಟ : ತಲಾ 1 ಲಕ್ಷ ರೂ. ಪರಿಹಾರಕ್ಕೆ ಅಸೋಸಿಯೇಷನ್ ಒತ್ತಾಯ

22/05/2020

ಮಡಿಕೇರಿ ಮೇ 22 : ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಕೊಡಗಿನ ನೋಂದಾಯಿತ ಹೋಂಸ್ಟೇಗಳಿಗೆ ತಲಾ ಒಂದು ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಕೊಡಗು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ವಿ.ಸೋಮಣ್ಣ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿರುವ ಅಸೋಸಿಯೇಷನ್‍ನ ಪದಾಧಿಕಾರಿಗಳು, ಹೋಂಸ್ಟಗಳಿಗೆ ಎರಡು ವರ್ಷಗಳ ಕಾಲ ಎಲ್ಲಾ ರೀತಿಯ ತೆರಿಗೆ ವಿನಾಯಿತಿ ನೀಡುವಂತೆಯೂ ಆಗ್ರಹಿಸಿದರು.
ಕೊಡಗಿನ ಹೋಂಸ್ಟೇಗಳು ಕರ್ನಾಟಕದ ಪ್ರವಾಸೋದ್ಯಮಕ್ಕೆ ಗಮನಾರ್ಹವಾದ ಆರ್ಥಿಕ ಕೊಡುಗೆ ನೀಡುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಪ್ರವಾಸಿಗರಿಲ್ಲದೆ ಹೋಂಸೇಗಳು ಸಂಕಷ್ಟ ಎದುರಿಸಿವೆ. ಇದೀಗ ಕೊರೋನಾ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಹೋಂಸ್ಟೇ ಉದ್ಯಮದ ನೆರವಿಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಪದಾಧಿಕಾರಿಗಳು ಸಚಿವರ ಗಮನಸೆಳೆದರು. ಅಲ್ಲದೆ ಕೇಂದ್ರ ಸರ್ಕಾರ ಘೋಷಿಸಿರುವ 20ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್‍ನಲ್ಲಿ ಹೋಂಸ್ಟೇ ಉದ್ಯಮಕ್ಕೂ ನೆರವು ಒದಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ.ಅನಂತಶಯನ, ಗೌರವ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ, ಪದಾಧಿಕಾರಿಗಳಾದ ಕರಂಬಯ್ಯ, ಮುದ್ದಪ್ಪ, ಕಲ್ಮಾಡಂಡ ಶಶಿ ಮೊಣ್ಣಪ್ಪ, ಮೋಂತಿ ಗಣೇಶ್, ಉಷಾ ಗಣಪತಿ ಹಾಜರಿದ್ದರು.