ಕಂದಾಯ ಹೆಚ್ಚಳಕ್ಕೆ ವಿರೋಧ : ವಾಣಿಜ್ಯೋದ್ಯಮಿಗಳಿಂದ ಸಚಿವ ಸೋಮಣ್ಣಗೆ ಮನವಿ

22/05/2020

ಮಡಿಕೇರಿ ಮೇ 22 : ಕುಶಾಲನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳ ಕಂದಾಯವನ್ನು ಶೇಕಡಾ 18 ರಿಂದ 21 ಕ್ಕೆ ಹೆಚ್ಚಿಸಿರುವುದನ್ನು ಸಂಪೂರ್ಣ ರದ್ದುಗೊಳಿಸಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮತ್ತು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ವಿವಿಧೆಡೆ ಸತತವಾಗಿ 3 ವರ್ಷದಿಂದ ವರ್ತಕರು ಸಂಕಷ್ಟಕ್ಕೆ ಸಿಲುಕಿ ಬಹಳಷ್ಟು ನಷ್ಟ ಅನುಭವಿಸಿದ್ದಾರೆ. ಈ ವರ್ಷ ಕೊರೋನ ಮಹಾಮಾರಿಯಿಂದ ಜನಜೀವನ ಸಂಪೂರ್ಣ ತತ್ತರಿಸಿದೆ.
ಸ್ಥಳೀಯ ವರ್ತಕರ ಬಹಳಷ್ಟು ವ್ಯಾಪಾರ ವಹಿವಾಟು ಕುಸಿದಿದ್ದು ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ಈ ಎಲ್ಲಾ ಹಿನ್ನಲೆಯಲ್ಲಿ ಮುಂದಿನ ಒಂದು ವರ್ಷಗಳ ಕಾಲ ತೆರಿಗೆ ಮನ್ನಾ ಮಾಡುವಂತೆ ಮನವಿ ಮಾಡಿದ್ದಾರೆ.
ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮವನ್ನು ಕೈಗೊಂಡು ವ್ಯಾಪಾರಿಗಳ ಹಿತ ಕಾಪಾಡುವ ಮೂಲಕ ಮುಂದಿನ ವರ್ಷ ತನಕ ತೆರಿಗೆ ವಸೂಲಿ ಸ್ಥಗಿತಗೊಳಿಸಬೇಕು ಎಂದು ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಉಪಾಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್, ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಅಮೃತ್‍ರಾಜ್ ಮತ್ತು ಸ್ಥಳೀಯ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.