ಕಾವೇರಿ ನದಿ ನಿರ್ವಹಣೆಗೆ ಅಡ್ಡಿ ಪಡಿಸದಂತೆ ಸಚಿವ ಸೋಮಣ್ಣ ಸೂಚನೆ

22/05/2020

ಮಡಿಕೇರಿ ಮೇ 22 : ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಯಾರೂ ಅಡ್ಡಿಪಡಿಸಬಾರದೆಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಅವರು ಜಿಲ್ಲೆಯ ಗಡಿ ಕುಶಾಲನಗರ ಸೇತುವೆ ಬಳಿ ನಡೆಯುತ್ತಿರುವ ಕಾವೇರಿ ನದಿ ನಿರ್ವಹಣೆ ಕಾಮಗಾರಿಯನ್ನು ವೀಕ್ಷಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರು 88 ಲಕ್ಷ ವೆಚ್ಚದಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ ಕೈಗೊಂಡಿರುವ ಗಿಡ ಗಂಟಿ ತೆರವು, ಜೆಂಡು ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ಸಚಿವರು ಮಳೆ ಆರಂಭಕ್ಕೂ ಮುನ್ನ ತುರ್ತಾಗಿ ಕಾಮಗಾರಿ ಪೂರ್ಣಗೊಳಿಸಲು ಕಾವೇರಿ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.
ಯಾವುದೇ ಕಾರಣಕ್ಕೂ ಕಾಮಗಾರಿ ಸ್ಥಗಿತವಾಗಬಾರದು. ಭವಿಷ್ಯದಲ್ಲಿ ಮತ್ತಷ್ಟು ಭೀಕರತೆ ಉಂಟಾಗುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಕೈಗೊಂಡಿರುವ ನದಿ ನಿರ್ವಹಣೆ ಕಾಮಗಾರಿ ಸ್ವಾಗತಾರ್ಹ ಮತ್ತು ಸಮಯೋಚಿತವಾಗಿದೆ ಎಂದರು.
ಪ್ರವಾಹ ಸಂತ್ರಸ್ಥರ ಪರವಾಗಿ ಕಾಳಜಿ ವಹಿಸಿ ಶ್ರಮವಹಿಸಿದ ಕುಶಾಲನಗರ ಪ್ರವಾಹ ಸಂತ್ರಸ್ಥ ವೇದಿಕೆ ಪ್ರಮುಖರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಸಚಿವರು ವೇದಿಕೆ ಪ್ರಮುಖರನ್ನು ಶಾಲು ಹೊದಿಸಿ ಗೌರವಿಸಿ ಅಭಿನಂದಿಸಿದರು. ಸಚಿವರೊಂದಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚುರಂಜನ್, ಪಪಂ ಸದಸ್ಯರಾದ ಅಮೃತ್‍ರಾಜ್, ನದಿ ಪ್ರವಾಹ ಸಂತ್ರಸ್ಥರ ವೇದಿಕೆ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಕಾರ್ಯಾಧ್ಯಕ್ಷ ಎಂ.ಎಂ.ಚರಣ್, ಉಪಾಧ್ಯಕ್ಷ ತೋರೇರ ಉದಯಕುಮಾರ್, ಕಾರ್ಯದರ್ಶಿ ವರದ, ಖಜಾಂಚಿ ಕೊಡಗನ ಹರ್ಷ, ಬಡಾವಣೆಗಳ ಪ್ರಮುಖರು ಹಾಜರಿದ್ದರು.