ಶನಿವಾರಸಂತೆ ಘರ್ಷಣೆ ಪ್ರಕರಣ : ಸೂಕ್ತ ಕ್ರಮಕ್ಕೆ ಕೊಡಗು ಕಾಂಗ್ರೆಸ್ ಆಗ್ರಹ

22/05/2020

ಸೋಮವಾರಪೇಟೆ ಮೇ 22 : ಶನಿವಾರಸಂತೆ ಠಾಣೆಯಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಗೂಂಡಾಗಿರಿ ಮಾಡಿದ ಹಾಗು ಆ ದಿನ ರಾತ್ರಿ ಲಾರಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.
ಶನಿವಾರಸಂತೆ ಅಕ್ಮಲ್ ಹಾಗೂ ಇತರರ ನಡುವೆ ನಡೆದ ಚಿಕ್ಕ ಘಟನೆಯನ್ನು ಠಾಣಾಧಿಕಾರಿ ಸೌದಾರ್ಹಯುತವಾಗಿ ಬಗೆಹರಿಸಿದ್ದಾರೆ. ಆದರೆ ಇದನ್ನು ಸಹಿಸಿದ ಕೆಲವರು ಹಾಸನ ಜಿಲ್ಲೆಯಿಂದ ಗೂಂಡಾಗಳನ್ನು ನಿಯಮಬಾಹಿರವಾಗಿ ಕರೆ ತಂದು ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಗೂಂಡಾಗಿರಿ ನಡೆಸಿದ್ದಾರೆ. ಅಂದೇ ರಾತ್ರಿ ಹುಲ್ಲೂರಿಕೊಪ್ಪ ಗ್ರಾಮದ ತೋಟವೊಂದರಲ್ಲಿ ಟಿಂಬರ್ ಕೆಲಸಕ್ಕೆ ನಿಲ್ಲಿಸಿದ್ದ ಜಾಕಿರ್ ಪಾಷ ಎಂಬವರ ಲಾರಿಗೆ ಬೆಂಕಿ ಹಚ್ಚಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಆರೋಪಿಸಿದರು.
ಠಾಣೆಯಲ್ಲೇ ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಪೊಲೀಸರ ಮೃದುಧೋರಣೆ, ಅಸಹಾಯಕತೆಯಿಂದ ಇಂತಹ ಘಟನೆಗಳು ನಡೆಯುತ್ತಿವೆ. ಗೂಂಡಾಗಿರಿಯನ್ನು ಮಟ್ಟಹಾಕುವ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು ಎಂದರು.
ಜಿಲ್ಲೆಯಲ್ಲಿ ಧರ್ಮ ಹಾಗು ಜಾತಿಯ ಹೆಸರಿನಲ್ಲಿ ಗಲಭೆ ಸೃಷ್ಟಿಸಿ, ಮತಬ್ಯಾಂಕ್ ಸ್ಥಾಪಿಸಿಕೊಳ್ಳುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ನೈತಿಕವಾಗಿ ಆಡಳಿತ ನಡೆಸುವುದು ಆ ಪಕ್ಷಕ್ಕೆ ಗೊತ್ತಿಲ್ಲ. ವಾಮಮಾರ್ಗದಲ್ಲಿ ಗ್ರಾಮ ಪಂಚಾಯಿತಿಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಕುತಂತ್ರ ಮಾಡಲಾಗುತ್ತಿದೆ.
ಅಧಿಕಾರ ಮುಗಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ, ಬಿಜೆಪಿ ಕಾರ್ಯಕರ್ತರ ಆಡಳಿತ ಮಂಡಳಿಯನ್ನು ಸ್ಥಾಪಿಸುವ ಪ್ರಜಾಪ್ರಭುತ್ವ ವಿರೋಧಿ ಕಾನೂನು ತರಲು ಹುನ್ನಾರ ನಡೆಸಲಾಗುತ್ತಿದೆ. ಇಂತಹ ಕಾನೂನು ಜಾರಿಗೆ ತಂದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಮುಂದಿನ ಚುನಾವಣೆಯ ತನಕ ಹಳೆ ಆಡಳಿತ ಮಂಡಳಿಯನ್ನೇ ಮುಂದುವರಿಸಬೇಕು ಎಂದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಾಹಿದ್ ಖಾನ್, ಅಸಂಘಟಿತ ಕಾರ್ಮಿಕರ ರಾಜ್ಯ ಸಮಿತಿ ಸದಸ್ಯ ಅಶ್ರಪ್ ಇದ್ದರು.