ಡಬ್ಲ್ಯುಎಚ್‍ಒ ಅಧ್ಯಕ್ಷರಾಗಿ ಹರ್ಷ್‍ವರ್ಧನ್

23/05/2020

ನವದೆಹಲಿ ಮೇ 22 : ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‍ಒ) ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಮಂಡಳಿಯ 147ನೇ ಅಧಿವೇಶನದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‍ಒ) ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾಗಿ ಜಪಾನಿನ ಡಾ.ಹಿರೋಕಿ ನಕಟಾನಿ ಅವರಿಂದ ಅಧಿಕಾರ ಸ್ವೀಕರಿಸಿದರು.
ಕೊರೋನಾ ವೈರಸ್‍ಎಂಬ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ನಾನು ಈ ಕಚೇರಿಗೆ(ವಿಶ್ವ ಆರೋಗ್ಯ ಸಂಸ್ಥೆ) ಪ್ರವೇಶಿಸುತ್ತಿದ್ದೇನೆ. ಮುಂದಿನ ಎರಡು ದಶಕಗಳಲ್ಲಿ ಅನೇಕ ಆರೋಗ್ಯ ಸವಾಲುಗಳು ಎದುರಾಗುತ್ತವೆ ಎಂಬುದನ್ನು ನಾವು ಇದೇ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕು. ಈ ಎಲ್ಲ ಸವಾಲುಗಳನ್ನು ನಾವು ನಮ್ಮ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮೂಲಕ ಎದುರಿಸಬೇಕಾದ ಅಗತ್ಯವಿದೆ ಎಂದು ಅಧಿಕಾರ ಸ್ವೀಕರಿಸಿದ ಬಳಿಕ ಹರ್ಷ್ ವರ್ಧನ್ ಅವರು ಹೇಳಿದ್ದಾರೆ.
ಭಾರತದ ಪ್ರತಿನಿಧಿಯನ್ನು ಕಾರ್ಯಕಾರಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಬೇಕು ಎನ್ನುವ ಪ್ರಸ್ತಾವನೆಗೆ 194 ದೇಶಗಳನ್ನೊಳಗೊಂಡ ವಿಶ್ವ ಆರೋಗ್ಯ ಸಭೆಯಲ್ಲಿ ನಿನ್ನೆ (ಮೇ 19) ಸಹಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.