ಒಂದೇ ದಿನ 138 ಮಂದಿಗೆ ಸೋಂಕು

23/05/2020

ಬೆಂಗಳೂರು ಮೇ 22 : ರಾಜ್ಯದಲ್ಲಿ ಲಾಕ್ ಡೌನ್ ಸಡಿಲಗೊಳಿಸಿದ ನಂತರ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಶುಕ್ರವಾರ ಮತ್ತೆ 138 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1743ಕ್ಕೆ ಏರಿಕೆಯಾಗಿದೆ.
ಇಂದು ಚಿಕ್ಕಬಳ್ಳಾಪುರದಲ್ಲಿ ಕೊರೋನಾ ಮಹಾಮಾರಿ ತಾಂಡವವಾಡುತ್ತಿದ್ದು, ಒಂದೇ ದಿನ 47 ಮಂದಿಗೆ ಸೋಂಕು ವಕ್ಕರಿಸಿದೆ. ಮಹಾರಾಷ್ಟ್ರದಿಂದ ಮೇ 19 ರಂದು ಜಿಲ್ಲೆಗೆ ವಾಪಾಸಾಗಿರುವವರ 265 ಜನರ ಪೈಕಿ ಗುರುವಾರ ಗೌರಿಬಿದನೂರು ತಾಲ್ಲೂಕಿನ ನಾಲ್ಕು ಕಾರ್ಮಿಕರಲ್ಲಿ ಕೋವಿಡ್‍ಧೃಢಪಟ್ಟಿತ್ತು. ಅದರ ಬೆನ್ನಲ್ಲೇ ಶುಕ್ರವಾರ ಒಂದೇ ದಿನಕ್ಕೆ ಮತ್ತೆ 47 ಜನರಿಗೆ ಕೊವಿಡ್‍ತಗುಲಿರುವುದು ಪತ್ತೆಯಾಗಿದೆ.
ಇಂದು ಬೆಂಗಳೂರು ಸಂಚಾರ ಪೊಲೀಸ್ ಸಿಬ್ಬಂದಿಗೂ ಸೋಂಕು ತಗುಲಿದ್ದು, ಪೊಲೀಸ್ ವಲಯದಲ್ಲಿ ಆತಂಕ ಮೂಡಿಸಿದೆ. ರಾಮಕೃಷ್ಣ ಹೆಗಡೆ ನಗರದ ನಿವಾಸಿಯಾಗಿರುವ ಕಾನ್‍ಸ್ಟೆಬಲ್, ಕೊರೊನಾ ಕರ್ತವ್ಯದಿಂದಾಗಿ ಕಳೆದ ತಿಂಗಳೇ ಕುಟುಂಬದವರನ್ನು ಊರಿಗೆ ಕಳುಹಿಸಿದ್ದರು. ಮೇ 20ರಂದು ಇವರು ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಟ್ಟಿದ್ದರು. ವರದಿಯಲ್ಲಿ ಇವರಿಗೆ ಸೋಂಕು ದೃಢಪಡುತ್ತಿದ್ದಂತೆ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.