ಬೆಂಗಳೂರು ನಗರಾದ್ಯಂತ ಕಫ್ರ್ಯೂ ಜಾರಿ

23/05/2020

ಬೆಂಗಳೂರು ಮೇ 22 : ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೆ ನಗರಾದ್ಯಂತ ಕಫ್ರ್ಯೂ ಜಾರಿಯಲ್ಲಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಶುಕ್ರವಾರ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ಸಡಿಲಗೊಳಿಸಿದ್ದರಿಂದ ಯಾರೊಬ್ಬರೂ ವೀಕೆಂಡ್ ಪ್ಲಾನ್ ಮಾಡಬಾರದು. ಸದ್ಯ ನಾವು ಲಾಕ್ ಡೌನ್ 4 ರಲ್ಲಿದ್ದು, ಸೋಮವಾರದಿಂದ ಶನಿವಾರದವರೆಗೆ ಮಾತ್ರ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಆದರೆ, ಭಾನುವಾರ ಎಂದಿನಂತೆ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.
ಅಲ್ಲದೇ, ಅನಗತ್ಯವಾಗಿ ಯಾರು ಕೂಡ ರಸ್ತೆಗೆ ಇಳಿಯಬಾರದು. ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಗಳನ್ನು ಹಾಕಿ ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ ಎಂದರು.
ಹಣ್ಣು, ತರಕಾರಿ, ಅಗತ್ಯ ವಸ್ತುಗಳು, ವೈದ್ಯ, ಅರೆ ವೈದ್ಯಕೀಯ ಸಿಬ್ಬಂದಿ, ದಾದಿಯರು ಹಾಗೂ ಆಂಬುಲೆನ್ಸ್ ಓಡಾಟಕ್ಕೆ ಮಾತ್ರ ರವಿವಾರ ಅವಕಾಶ ನೀಡಲಾಗಿದೆ ಎಂದರು.