ನಿವೇಶನ ರಹಿತರಿಗೆ ಕಾಯ್ದಿರಿಸಿದ್ದ ಪೈಸಾರಿಜಾಗ ಒತ್ತುವರಿ : ಬಿಳಿಗೇರಿ ಗ್ರಾಮದಲ್ಲಿ ಕಾರ್ಮಿರಿಂದ ಪ್ರತಿಭಟನೆ

23/05/2020

ಸೋಮವಾರಪೇಟೆ ಮೇ 23 : ನಿವೇಶನ ರಹಿತರಿಗೆ ಕಾಯ್ದಿರಿಸಿದ್ದ ಪೈಸಾರಿ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ, ಬಿಳಿಗೇರಿ ಗ್ರಾಮದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಗ್ರಾಮದ ಸರ್ವೆ ನಂ 193/3ರಲ್ಲಿ 1.87 ಎಕರೆ ಪೈಸಾರಿ ಜಾಗವನ್ನು ನಿವೇಶನ ರಹಿತರಿಗೆ ನೀಡಬೇಕೆಂದು ಕಿರಗಂದೂರು ಗ್ರಾಮ ಪಂಚಾಯಿತಿಯಲ್ಲಿ ಒಂದು ವರ್ಷದ ಹಿಂದಯೇ ನಿರ್ಣಯ ಕೈಗೊಳ್ಳಲಾಗಿತ್ತು. ಈಗ ಕಾಫಿ ಬೆಳೆಗಾರರೊಬ್ಬರು ಜಾಗವನ್ನು ಒತ್ತುವರಿ ಮಾಡಿಕೊಂಡು, ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ, ಕಾರ್ಮಿಕ ಮಹಿಳೆಯರು ಪೈಸಾರಿ ಜಾಗದಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ 15 ವರ್ಷಗಳ ಹಿಂದೆಯೇ ಈ ಪೈಸಾರಿ ಜಾಗದಲ್ಲಿ ನಿವೇಶನ ನೀಡಬೇಕೆಂದು ಇಲ್ಲಿನ ದಲಿತರು ಹಾಗೂ ಇತರ ಜನಾಂಗದ ಬಡವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇತ್ತೀಚೆಗೆ ಕಂದಾಯ ಇಲಾಖೆಯಿಂದ ನಿವೇಶನ ಕಲ್ಪಿಸುವ ಭರವಸೆ ಸಿಕ್ಕಿತ್ತು. ಈಗ ಪೈಸಾರಿ ಜಾಗವನ್ನು ಒತ್ತುವರಿ ಮಾಡಲಾಗುತ್ತಿದೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಬಿ.ಸೋಮಪ್ಪ ಹೇಳಿದರು.
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿ ವಿನು ಭೇಟಿ ನೀಡಿ, ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ವೆ ಮಾಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಪೈಸಾರಿ ಜಾಗದ ಹದ್ದುಬಸ್ತು ಸರ್ವೆ ನಡೆಸಿ, ಒತ್ತುವರಿಯಿದ್ದರೆ ತೆರವುಗೊಳಿಸಿ, ನಿವೇಶನ ನೀಡಲು ಸಂಬಂಧಪಟ್ಟ ಇಲಾಖೆಗೆ ಶಿಫಾರಸ್ಸು ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ಪತ್ರಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರುಗಳಾದ ಪಿ.ಟಿ.ಸುಂದರ, ಶಾರದ, ಪ್ರೇಮ, ಲಲಿತ, ಗಿರಿಜ ಮತ್ತಿತರರು ಇದ್ದರು.