ಮುಜರಾಯಿ ಇಲಾಖೆಯಿಂದ ತಾರತಮ್ಯ ನೀತಿ : ಬ್ರಾಹ್ಮಣರ ಸಂಘ ಆರೋಪ

23/05/2020

ಮಡಿಕೇರಿ ಮೇ 23 : ಮುಜರಾಯಿ ಇಲಾಖೆಯಲ್ಲಿ ನೋಂದಣಿಯಾದ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವÀ ಅರ್ಚಕರು, ಪರಿಚಾರಕರು ಹಾಗೂ ಅಡುಗೆಯವರಿಗೆ ಮಾತ್ರ ರಾಜ್ಯ ಸರ್ಕಾರ ಪರಿಹಾರ ಘೋಷಿಸಿರುವುದು ಸರಿಯಾದ ಕ್ರಮವಲ್ಲ ಎಂದು ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಎನ್. ಮಹಾಭಲೇಶ್ವರ ಭಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ ಮುಜರಾಯಿ ಸಚಿವರು ಕೆಲವರಿಗೆ ಮಾತ್ರ ಸೀಮಿತಗೊಳಿಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಈ ಕ್ರಮದಿಂದ ಗ್ರಾಮೀಣ ಭಾಗದ ಅರ್ಚಕರಿಗೆÀ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.
ದೇಶ ವ್ಯಾಪಿ ಹರಡುತ್ತಿರುವ ಕೊರೋನಾ ವೈರಸ್‍ನಿಂದಾಗಿ ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆ ವಿವಿಧ ರೀತಿಯ ಶ್ರಮಿಕರ ಜೀವನೋಪಯಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿವಿಧ ಪರಿಹಾರ, ಸಾಲ ಯೋಜನೆಗಳನ್ನು ಘೋಷಿಸಿದೆ. ಅದೇ ರೀತಿ ಅರ್ಚಕರಿಗೂ ಸಹಾಯಧನವನ್ನು ಘೋಷಿಸಬೇಕೆಂಬ ಒತ್ತಾಯಕ್ಕೆ ಮಣಿದ ಸಚಿವರು ಈಗ ತೆಗೆದುಕೊಂಡಿರುವ ಕ್ರಮ ತಾರತಮ್ಯದಿಂದ ಕೂಡಿದೆ ಎಂದು ಎನ್. ಮಹಾಭಲೇಶ್ವರ ಭಟ್ ಟೀಕಿಸಿದ್ದಾರೆ.
ರಾಜ್ಯದಲ್ಲಿ ಮುಜಾರಾಯಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೇವಾಲಯಗಳಿಗಿಂತ ಖಾಸಗಿಯಾಗಿ, ಸಾರ್ವತ್ರಿಕವಾಗಿ ನಡೆಸುವ ದೇವಾಲಯಗಳೇ ಹೆಚ್ಚು. ಗ್ರಾಮೀಣ ಭಾಗದ ಅರ್ಚಕರಿಗೆ ಮುಜರಾಯಿ ಇಲಾಖೆಯ ದೇವಾಲಯಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ, ಗ್ರಾಮಗಳಲ್ಲಿ ದೇವಾಲಯಗಳನ್ನು ಪ್ರತಿಷ್ಠಾಪಿಸಿ ಪೂಜಿಸಲು ಅರ್ಚಕರನ್ನು ನೇಮಿಸಿದ್ದು, ಆ ದೇವಾಲಯಗಳಲ್ಲಿ ಆದಾಯ ಇಲ್ಲ ಎಂದು ಮುಜಾರಾಯಿ ಇಲಾಖೆ ನೋಂದಣಿ ಮಾಡಿಕೊಂಡಿಲ್ಲ.
ಈ ವರ್ಗಕ್ಕೆ ಸೇರುವ ದೇವಾಲಯಗಳ ಅರ್ಚಕರಿಗೆ ಸರ್ಕಾರದ ಪ್ಯಾಕೇಜ್ ನಿಂದ ಯಾವುದೇ ಲಾಭವಿಲ್ಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪೂಜಾ, ಪುನಸ್ಕಾರವನ್ನು ಆನ್‍ಲೈನ್ ಮೂಲಕ ನೇರ ಪ್ರಸಾರ ಮಾಡಲು ಸರ್ಕಾರ ಚಿಂತನೆ ನಡೆಸಿರುವುದಲ್ಲದೆ, ಪ್ರಸಾದ ವಿತರಣೆಯನ್ನು ಅಂಚೆ ಮೂಲಕ ತಲುಪಿಸುವ ಯೋಜನೆ ರೂಪಿಸಲು ಮುಂದಾಗಿದೆ. ಆ ಮೂಲಕ ಸರ್ಕಾರ ಗ್ರಾಮೀಣ ಭಾಗದ ಸಂಸ್ಕøತಿ, ಪರಂಪರೆ ಹೊಂದಿರುವ ಹಿಂದೂ ಧಾರ್ಮಿಕತೆಯನ್ನು ಅಪಹಾಸ್ಯ ಮಾಡಲು ಹೊರಟಂತ್ತಿದೆ ಎಂದು ಎನ್. ಮಹಾಭಲೇಶ್ವರ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ನೇತಾರರನ್ನು ಅಥವಾ ಹಿಂದೂ ಧರ್ಮದ ನೇತಾರರನ್ನು ಸಂಪರ್ಕಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಈ ರೀತಿಯ ಕ್ರಮಕ್ಕೆ ಮುಂದಾಗುವ ಮೂಲಕ ಭಕ್ತರ ನಂಬಿಕೆಗೆ ಚ್ಯುತಿ ತರಲಾಗಿದೆ. ದೇವರ ಸೇವೆ ಭಕ್ತಾಧಿಗಳ ವೈಯಕ್ತಿಕ ಭಾವನೆಗೆ ಸಂಬಂಧಿಸಿದ್ದು, ಆನ್‍ಲೈನ್ ಪೂಜಾ ವ್ಯವಸ್ಥೆಯನ್ನು ತಂದು ಭಕ್ತಾಧಿಗಳ ಭಾವನೆಗೆ ದಕ್ಕೆ ತರುವುದಕ್ಕಿಂತ ಈ ರೀತಿಯ ಕ್ರಮಗಳನ್ನು ಕೈ ಬಿಟ್ಟು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವ ಅಗತ್ಯವಿದೆ. ಗ್ರಾಮೀಣ ಭಾಗದ ಅರ್ಚಕರು, ಪುರೋಹಿತರು ಹಾಗೂ ಅಡುಗೆ ಕೆಲಸದವರಿಗೆ ಆಯಾಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಫಲಾನುಭವಿಗಳೆಂದು ಗುರುತಿಸಿ ಪರಿಹಾರ ಧನದ ನೆರವು ನೀಡಬೇಕೆಂದು ಎನ್. ಮಹಾಭಲೇಶ್ವರ ಭಟ್ ಒತ್ತಾಯಿಸಿದ್ದಾರೆ.