ಕೊಡಗು ಬಿಎಸ್‍ಎನ್‍ಎಲ್ ನೌಕರರಿಗೆ ವೇತನ ಖೋತಾ : ಪ್ರತಿಭಟನೆಯ ಎಚ್ಚರಿಕೆ

23/05/2020

ಮಡಿಕೇರಿ ಮೇ 23 : ಕಳೆದ 10 ತಿಂಗಳುಗಳಿಂದ ವೇತನ ದೊರಕದ ಹಿನ್ನೆಲೆಯಲ್ಲಿ ಭಾರತ ಸಂಚಾರ ನಿಗಮ (ಬಿಎಸ್‍ಎನ್‍ಎಲ್)ದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗು ಗುತ್ತಿಗೆ ನೌಕರರು ತಮ್ಮ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
ಈಗಾಗಲೇ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಬಿಎಸ್‍ಎನ್‍ಎಲ್ ಎಲ್ಲಾ ಕೆಲಸ ಕಾರ್ಯಗಳನ್ನು ಗುತ್ತಿಗೆ ನೌಕರರ ಮೂಲಕವೇ ಮಾಡಿಸಿಕೊಳ್ಳುತ್ತಿದ್ದರೂ, ಕಳೆದ 10 ತಿಂಗಳುಗಳಿಂದ ವೇತನ ನೀಡಿಲ್ಲ. ಅಲ್ಲದೆ ವೇತನ ಕೇಳಿದರೆ ಕೆಲಸದಿಂದ ವಜಾಗೊಳಿಸುವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಬಿಎಸ್‍ಎನ್‍ಎಲ್ ನಾನ್ ಪರ್ಮನೆಂಟ್ ಎಂಪ್ಲಾಯಿಸ್ ಯೂನಿಯನ್ ಆರೋಪಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎ.ಬಸವರಾಜು ಅವರು, ಮೈಸೂರಿನ ರಂಗನಾಥ್ ಎಂಟರ್‍ಪ್ರೈಸಸ್ ಸಂಸ್ಥೆಯ ಅಡಿಯಲ್ಲಿ ಸುಮಾರು 175 ಮಂದಿ ಗುತ್ತಿಗೆ ನೌಕರರು ಕೊಡಗು ಜಿಲ್ಲೆಯ ವಿವಿಧ ದೂರವಾಣಿ ಕೇಂದ್ರಗಳಲ್ಲಿ ಕಳೆದ 15-20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಬಿಎಸ್‍ಎನ್‍ಎಲ್‍ನ ಸಾವಿರಾರು ಸಿಬ್ಬಂದಿಗಳು ಸ್ವಯಂ ನಿವೃತ್ತಿ ಪಡೆದಿದ್ದು, ಇದರಿಂದಾಗಿ ನಿಗಮದ ಬಹುತೇಕ ಎಲ್ಲಾ ಕೆಲಸ ಕಾರ್ಯಗಳ ಹೊರೆಯನ್ನು ಗುತ್ತಿಗೆ ನೌಕರರ ಮೇಲೆಯೇ ಹೊರಿಸಲಾಗುತ್ತಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ, ಪ್ರವಾಹ ಮುಂತಾದ ತುರ್ತು ಸಂದರ್ಭದಲ್ಲೂ ಹಗಲಿರುಳು ಗುತ್ತಿಗೆ ನೌಕರರು ಕೆಲಸ ಮಾಡಿದ್ದು, ಇದೀಗ ಕೊರೋನಾ ಲಾಕ್‍ಡೌನ್ ಸಂದರ್ಭದಲ್ಲೂ ಯಾವುದೇ ರಕ್ಷಣೆ ಇಲ್ಲದೆ ನಾವುಗಳು ಕೆಲಸ ಮಾಡಿದ್ದೇವೆ. ಆದರೆ ಕಳೆದ 10 ತಿಂಗಳುಗಳಿಂದ ನಮಗೆ ವೇತನ ನೀಡದೆ ಸತಾಯಿಸಲಾಗುತ್ತಿದೆ. ಗುತ್ತಿಗೆದಾರರನ್ನು ಕೇಳಿದರೆ ನಿಗಮದಿಂದ ಹಣ ಬಂದಿಲ್ಲ ಎಂಬ ಉತ್ತರ ಬಂದರೆ, ನಿಗಮದವರನ್ನು ಕೇಳಿದರೆ ನಾವು ವೇತನ ನೀಡಿದ್ದೇವೆ. ನಿಮಗೆ ಕೆಲಸ ಮಾಡಲು ಆಗಿದ್ದರೆ ಬೇರೆಯವರನ್ನು ನೇಮಿಸಿಕೊಳ್ಳುತ್ತೇವೆ ಎಂಬ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವಲತ್ತುಕೊಂಡರು.
ಕೇಂದ್ರ ಸರಕಾರದ ಅಧೀನದ ಬಿಎಸ್‍ಎನ್‍ಎಲ್‍ನ ಖಾಯಂ ಸಿಬ್ಬಂದಿಗಳು ಕೆಲಸ ಮಾಡದೆಯೇ ಪ್ರತಿ ತಿಂಗಳು ವೇತನ ಪಡೆಯುತ್ತಿದ್ದಾರೆ. ಆದರೆ ಹಗಲಿರುಳು ಕಷ್ಟಪಟ್ಟು ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ ವೇತನವೇ ಇಲ್ಲದಾಗಿದೆ. ಪಿಎಫ್ ಇಎಸ್‍ಐ ಹಣವನ್ನು ಕೂಡಾ ನಮ್ಮ ಖಾತೆಗಳಿಗೆ ಜಮಾ ಮಾಡಿಲ್ಲ. ತಿಂಗಳಿಗೆ ನೀಡುವ 9 ಸಾವಿರ ರೂ. ವೇತನದಲ್ಲೇ ಜೀವನ ಸಾಗಿಸಬೇಕಿದ್ದು, ಅದನ್ನೂ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಕುಟುಂಬ ನಿರ್ವಹಣೆ ಸಾಧ್ಯವಾಗದೆ ಸಾವಿನ ಸರಣಿ ಆರಂಭವಾಗಲಿದೆ ಎಂದು ನೊಂದು ನುಡಿದರು.
ಕೇಂದ್ರ ಸರಕಾರದ ಅಧೀನದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೂ, ನಮಗೆ ಕನಿಷ್ಟ ವೇತನ ಕೂಡಾ ಸಿಗುತ್ತಿಲ್ಲ ಎಂದು ಆರೋಪಿಸಿದ ಅವರು, ದಿನಕ್ಕೆ 8ಗಂಟೆ ಕರ್ತವ್ಯ ಎನ್ನಲಾಗುತ್ತಿದೆ. ಆದರೆ 12ಗಂಟೆ ದುಡಿಯಬೇಕಾದ ಅನಿವಾರ್ಯತೆಯೂ ಇದೆ. ಕೆಲವು ಸಂದರ್ಭದಲ್ಲಿ ಅಪಾಯಕಾರಿ ಕೆಲಸಕ್ಕೆ ಅಧಿಕಾರಿಗಳು ಕರೆದು ಕೆಲಸ ಮಾಡಿಸಿಕೊಂಡರೂ, ಏನಾದರೂ ಅನಾಹುತ ಸಂಭವಿಸಿದಲ್ಲಿ ತಾವು ಅವರನ್ನು ಕೆಲಸಕ್ಕೇ ಕರೆದಿಲ್ಲ ಎಂದು ಜಾರಿಕೊಳ್ಳುವ ಪ್ರಯತ್ನಗಳೂ ನಡೆಯುತ್ತಿವೆ. ಅಧಿಕಾರಿಗಳಿಂದ ಗುತ್ತಿಗೆ ನೌಕರರ ನಿತ್ಯ ನಿರಂತರ ಶೋಷಣೆ ನಡೆಯುತ್ತಿದ್ದು, ಈ ಬಗ್ಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಸ್ಪಂದನ ದೊಕರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗುತ್ತಿಗೆ ನೌಕರರು ಕೆಲಸ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೋಣಿಕೊಪ್ಪ ಘಟಕದ ಕಾರ್ಯದರ್ಶಿ ಎಂ.ಎಂ.ಗಣೇಶ್, ಸೋಮವಾರಪೇಟೆ ಕಾರ್ಯದರ್ಶಿ ಎ.ಟಿ. ರವಿ ಮಾತನಾಡಿ ತಮ್ಮ ಸಂಕಷ್ಟಗಳನ್ನು ತೋಡಿಕೊಂಡರು. ಸಂಘಟನೆಯ ರಾಜ್ಯ ಕಾರ್ಯದರ್ಶಿ ಟಿ.ಎಸ್. ಪ್ರಕಾಶ್, ಗೋಣಿಕೊಪ್ಪದ ಮಂಜುನಾಥ್ ಹಾಗೂ ವೀರಾಜಪೇಟೆ ಕಾರ್ಯದರ್ಶಿ ಬಿ.ಡಿ.ಆನಂದ ಉಪಸ್ಥಿತರಿದ್ದರು.