ಶನಿವಾರಸಂತೆಯಲ್ಲಿ ಶಾಂತಿ ಕದಡುವ ಯತ್ನ : ವಿಹೆಎಚ್‍ಪಿ ಆರೋಪ

23/05/2020

ಮಡಿಕೇರಿ ಮೇ 23 : : ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಶನಿವಾರಸಂತೆಯ ಕೆಲವರು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನದಲ್ಲಿ ತೊಡಗಿದ್ದು, ದುಷ್ಕøತ್ಯಗಳಿಗೆ ಪೊಲೀಸರು ತಕ್ಷಣ ಕಡಿವಾಣ ಹಾಕಬೇಕೆಂದು ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾ ಘಟಕ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಹೆಚ್‍ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹ, ಹಿಂದೂ ಜಾಗರಣ ವೇದಿಕೆ ಸಂಘಟನಾ ಕಾರ್ಯದರ್ಶಿ ಬಿ.ಬಿ.ಮಹೇಶ್ ಮತ್ತಿತರರು, ಶನಿವಾರಸಂತೆಯ ಇರ್ಫಾನ್, ರಿಯಾನ್ ಹಾಗೂ ಸಂಗಡಿಗರು ಮೇ 18ರಂದು ರಾತ್ರಿ ಅಲ್ಲಿನ ಹಿಂದೂ ಸಂಘಟನೆಯ ಕಾರ್ಯಕರ್ತ ದರ್ಶನ್ ಎಂಬವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ಬಳಿಕ ಆಸ್ಪತ್ರೆ ಹಾಗೂ ಪೊಲೀಸ್ ಠಾಣೆಗಳಿಗೆ ಮಾರಕಾಸ್ತ್ರಗಳೊಂದಿಗೆ ಬಂದ ಪಿಎಫ್‍ಐ ಕಾರ್ಯಕರ್ತರು ಮತ್ತೊಮ್ಮೆ ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲದೆ ಪೊಲೀಸರ ಎದುರೇ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದರು.
ಶನಿವಾರಸಂತೆ ಪೊಲೀಸರಿಗೆ ದೂರು ನೀಡಿದರೂ, ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು ಒಂದು ದಿನದ ನಂತರ ಕೇಸ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಹಲ್ಲೆ ನಡೆಸಿದವರಿಂದಲೇ ಪ್ರತಿ ದೂರನ್ನೂ ಪಡೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಗುಂಪು ಮರುದಿನ ದರ್ಶನ್ ಅವರ ಯೋಗಕ್ಷೇಮ ವಿಚಾರಿಸಲು ಬಂದ ಸಕಲೇಶಪುರದ ಅವರ ಸಂಬಂಧಿಯ ಮೇಲೂ ಹಲ್ಲೆಗೆ ಮುಂದಾಗಿದೆ. ಸಮಾಜದಲ್ಲಿ ಶಾಂತಿ ಕದಡುವ ದುರುದ್ದೇಶದಿಂದಲೇ ಈ ಕೃತ್ಯವನ್ನು ಆರೋಪಿಗಳು ಮಾಡಿದ್ದಾರೆ ಎಂದು ದೂರಿದರು.
ಹತ್ತಾರು ವರ್ಷಗಳಿಂದ ಟಿಂಬರ್ ಮಾಫಿಯಾದಲ್ಲಿ ತೊಡಗಿಕೊಂಡಿರುವ ಒಂದೇ ಕುಟುಂಬದ ಹತ್ತಾರು ಸದಸ್ಯರ ಗುಂಪು ಇಡೀ ಶನಿವಾರಸಂತೆ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿರುವುದು ಪೊಲೀಸ್ ಇಲಾಖೆಗೆ ಸ್ಪಷ್ಟ ಮಾಹಿತಿ ಇದ್ದರೂ, ಈ ದುಷ್ಕøತ್ಯಗಳನ್ನು ತಡೆದು ಸಮಾಜದಲ್ಲಿ ಶಾಂತಿ ಸ್ಥಾಪಿಸುವ ಪ್ರಯತ್ನ ಮಾಡುತ್ತಿಲ್ಲವೆಂದು ಆರೋಪಿಸಿದರು.
ವಾಹನಕ್ಕೆ ಬೆಂಕಿ ಹಚ್ಚಿದ ಸೋಮವಾರಪೇಟೆ ಪ್ರಕರಣದಲ್ಲಿ ಹಿಂದೂ ಸಂಘಟನೆಗಳ ಪ್ರಮುಖರ ವಿರುದ್ಧ ಸುಳ್ಳು ಆರೋಪ ಹೊರಿಸಿ ದೂರು ನೀಡಲಾಗಿದೆ. ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪಿಎಫ್‍ಐ ಹಾಗೂ ಟಿಂಬರ್ ಮಾಫಿಯಾದವರ ಕೈವಾಡವಿದ್ದರೂ, ಇದರ ಹೊಣೆಯನ್ನು ಹಿಂದೂ ಸಂಘಟನೆಗಳ ಮೇಲೆ ಹೊರಿಸುವಲ್ಲಿ ಪಿಎಫ್‍ಐನ ಜಿಲ್ಲಾಧ್ಯಕ್ಷರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆಯಾಗಿದ್ದರೂ, ಆ ವ್ಯಕ್ತಿಯ ಮನೆಗೆ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸದ ಜಾತ್ಯತೀತತೆಯ ಮುಖವಾಡ ಧರಿಸಿರುವ ಕೆಲವು ರಾಜಕೀಯ ಪಕ್ಷಗಳು ಪ್ರಮುಖರು, ಆರೋಪಿಗಳ ಮನೆಗೆ ಭೇಟಿ ನೀಡಿ ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಿದ್ದಾರೆ ಎಂದು ನರಸಿಂಹ ಹಾಗೂ ಮಹೇಶ್ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್, ಬಜರಂಗದಳದ ಜಿಲ್ಲಾ ಸಂಚಾಲಕ ಕೆ.ಹೆಚ್.ಚೇತನ್, ವಿದ್ಯಾರ್ಥಿ ಪ್ರಮುಖ್ ಎನ್.ವಿನಯ್‍ಕುಮಾರ್ ಹಾಗೂ ಕುಮಾರ್ ಉಪಸ್ಥಿತರಿದ್ದರು.