ಏರಿಕೆಯಾಗುತ್ತಿದೆ ಸೋಂಕಿತರ ಸಂಖ್ಯೆ : ಆತಂಕ ಪಡದಂತೆ ಜಿಲ್ಲಾಧಿಕಾರಿ ಮನವಿ

24/05/2020

ಮಡಿಕೇರಿ ಮೇ 24 : ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಮೂರನೇ ಪ್ರಕರಣ ದೃಢಪಟ್ಟಿದ್ದರೂ, ಈ ವ್ಯಕ್ತಿ ಜಿಲ್ಲೆಯ ಯಾವುದೇ ವ್ಯಕ್ತಿಗಳೊಂದಿಗೆ ಸಂಪರ್ಕಕ್ಕೆ ಬರದಿರುವುದರಿಂದ ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಸೋಮವಾರಪೇಟೆ ತಾಲೂಕಿನ 26 ವರ್ಷ ಪ್ರಾಯದ ವ್ಯಕ್ತಿಯಲ್ಲಿ ಕೋವಿಡ್ -19 ಸೋಂಕು ದೃಢಪಟ್ಟಿದ್ದು, ಇದು ಕೊಡಗು ಜಿಲ್ಲೆಯಲ್ಲಿ ಕಂಡು ಬಂದಿರುವÀ ಮೂರನೇ ಕೋವಿಡ್ -19 ಪ್ರಕರಣವಾಗಿದೆ. ಈ ವ್ಯಕ್ತಿ (ಪಿ.2003)ಮುಂಬೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಮೇ 19ರ ಬೆಳಗ್ಗೆ 11ಗಂಟೆಗೆ ಮುಂಬೈಯ ಪನ್ವೇಲ್ ರೈಲ್ವೆ ನಿಲ್ದಾಣದಿಂದ ಮುಂಬೈ-ತಿರುವನಂತಪುರ (ರೈಲು ಸಂಖ್ಯೆ 02432, ಬೋಗಿ ಸಂಖ್ಯೆ 11, ಆಸನ ಸಂಖ್ಯೆ 24, 3ಎಸಿ) ವಿಶೇಷ ರೈಲಿನಲ್ಲಿ ಹೊರಟು ಮೇ 20ರ ಸಂಜೆ 5.15ಕ್ಕೆ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಅಲ್ಲಿಂದ ಖಾಸಗಿ ಇನ್ನೋವಾ ಟ್ಯಾಕ್ಸಿಯಲ್ಲಿ ಇತರ ಮೂವರೊಂದಿಗೆ ಹೊರಟು ರಾತ್ರಿ 9.15ಕ್ಕೆ ಸಂಪಾಜೆ ಗೇಟ್‍ನ ಚೆಕ್‍ಪೋಸ್ಟ್‍ಗೆ ಆಗಮಿಸಿದ್ದಾರೆ. ಅದೇ ಟ್ಯಾಕ್ಸಿಯಲ್ಲಿ ಅವರು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಬಂದು ರಾತ್ರಿ 10ಗಂಟೆಗೆ ದಾಖಲಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೋವಿಡ್ -19 ಸೋಂಕು ದೃಢÀಪಟ್ಟಿರುವ ವ್ಯಕ್ತಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಪ್ರಗತಿಯಲ್ಲಿದೆ. ಈ ವ್ಯಕ್ತಿಯು ಜಿಲ್ಲೆಯ ಯಾವುದೇ ವ್ಯಕ್ತಿಗಳೊಂದಿಗೆ ಸಂಪರ್ಕಕ್ಕೆ ಬಂದಿರದ ಕಾರಣ ಹಾಗೂ ಯಾವುದೇ ಸ್ಥಳಕ್ಕೆ ಭೇಟಿ ನೀಡದ ಕಾರಣ ಕಂಟೈನ್‍ಮೆಂಟ್ ವಲಯ ಘೋಷಿಸಿರುವುದಿಲ್ಲ. ಆದ್ದರಿಂದ ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.