ಕಾಂಗ್ರೆಸ್ ನಿಂದ ಕ್ಷುಲ್ಲಕ ರಾಜಕಾರಣ : ಸೋಮವಾರಪೇಟೆ ಬಿಜೆಪಿ ಆರೋಪ

24/05/2020

ಮಡಿಕೇರಿ ಮೇ 24 : ಕರೊನಾ ಲಾಕ್‍ಡೌನ್ ನಿಂದ ಜನರು ಸಂಕಷ್ಟದಲ್ಲಿರುವಾಗ, ಕಾಂಗ್ರೆಸ್ ರಾಜಕೀಯ ಮಾಡಲು ಹೊರಟಿರುವುದು ಖಂಡನೀಯ ಎಂದು ತಾಲೂಕು ಬಿಜೆಪಿ ಘಟಕ ಅಸಮಾಧಾನ ವ್ಯಕ್ತಪಡಿಸಿದೆ.
ಶನಿವಾರಸಂತೆಯಲ್ಲಿ ರೌಡಿಶೀಟರ್‍ಗಳಿಂದ ಯುವಕನೊಬ್ಬನ ಮೇಲೆ ಹಲ್ಲೆ ನಡೆದಿದೆ. ಆದರೆ ಮೊಕದ್ದಮೆ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯ ಬಾವ ಹಾಗು ಜೊತೆಗಾರರು ಠಾಣೆಗೆ ತೆರಳಿ ಪ್ರಶ್ನೆ ಮಾಡಿದ್ದಕ್ಕೆ, ಹಾಸನ ಜಿಲ್ಲೆಯಿಂದ ಸಂಘಪರಿವಾರದವರು ಬಂದು ಗೂಂಡಾಗಿರಿ ಮಾಡಿದ್ದಾರೆ ಎಂದು ಆರೋಪ ಮಾಡಿರುವುದು ಖಂಡನೀಯ ಎಂದು ಪಕ್ಷದ ವಕ್ತಾರ ಎಂ.ಬಿ.ಅಭಿಮನ್ಯು ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ ಹಾಗು ಹುಲ್ಲೂರಿಕೊಪ್ಪ ಗ್ರಾಮದಲ್ಲಿ ಲಾರಿ ಸುಟ್ಟ ಪ್ರಕರಣಕ್ಕೂ ಆರ್.ಎಸ್.ಎಸ್ ಹಾಗು ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಲಾರಿ ಸುಟ್ಟ ದುಷ್ಕರ್ಮಿಗಳನ್ನು ಪೊಲೀಸರು ಶೀಘ್ರವಾಗಿ ಬಂಧಿಸಲಿ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಅಧಿಕಾರ ಮುಕ್ತಾಯವಾಗಿ, ಒಂದು ದಿನವೂ ಅಧಿಕಾರದಲ್ಲಿರಲು ಸಾಧ್ಯವಿಲ್ಲ. ಕಾನೂನು ಪ್ರಕಾರ ಮುಂದಿನ ಚುನಾವಣೆ ತನಕ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಿಸಬೇಕು. ಪಂಚಾಯತ್ ರಾಜ್ ಕಾಯ್ದೆಯನ್ನು ಓದಿಕೊಳ್ಳದ ಕಾಂಗ್ರೆಸ್ ನಾಯಕರು ಅಪಪ್ರಚಾರ ನಡೆಸುತ್ತಿದ್ದಾರೆ. ಈಗ ಚುನಾವಣೆ ನಡೆದರೂ ಬಿಜೆಪಿ ಶೇ.80ರಷ್ಟು ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.
ಕರೊನಾ ಆತಂಕ ಮುಗಿಯುವ ತನಕ ಯಾವುದೋ ಪ್ರಕರಣಗಳಿಗೆ ರಾಜಕೀಯ ಬಣ್ಣ ಬಳಿಯುವುದನ್ನು ಯಾವುದೇ ಪಕ್ಷಗಳು ಮಾಡಬಾರದು ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಮನುಕುಮಾರ್ ರೈ, ಯುವಮೋರ್ಚಾ ನಗರಾಧ್ಯಕ್ಷ ಶರತ್, ಪಟ್ಟಣ ಪಂಚಾಯಿತಿ ಸದಸ್ಯರಾದ ಪಿ.ಕೆ.ಚಂದ್ರ, ಮಹೇಶ್ ಹಾಜರಿದ್ದರು.