ಭಾಗಮಂಡಲದಲ್ಲಿ ಪಿಂಡ ಪ್ರದಾನ ಕಾರ್ಯ ನಿರಾತಂಕ : ಸ್ಥಳೀಯರ ಆಕ್ಷೇಪ

25/05/2020

ಮಡಿಕೇರಿ ಮೇ 25 : ಕೊರೋನಾ ಲಾಕ್ ಡೌನ್ ಹಿನ್ನೆಲೆ ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲೂ ಭಕ್ತರ ಪ್ರವೇಶಕ್ಕೆ ನಿರ್ಬಂಧವಿದೆ.
ಆದರೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಕಾರ್ಯ ನಿರಾತಂಕವಾಗಿ ನಡೆಯುತ್ತಿದೆ. ಈ ಕಾರ್ಯಕ್ಕೆ ಕೆಲವು ಅರ್ಚಕರು ಸಹಕಾರ ನೀಡುತ್ತಿದ್ದಾರೆ. ಲಾಕ್ ಡೌನ್ ನಡುವೆಯೇ ಎಲ್ಲಾ ನಿಯಮಗಳನ್ನು ಮೀರಿ ಸಂಗಮದಲ್ಲಿ ಸ್ನಾನ ಮತ್ತು ಪಿಂಡ ಪ್ರದಾನ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಯಾರು, ಎಲ್ಲಿಂದ ಬರುತ್ತಾರೋ ತಿಳಿಯುತ್ತಿಲ್ಲ. ಸಾಮಾಜಿಕ ಅಂತರವೂ ಇಲ್ಲ, ಯಾವುದೇ ಮಾಸ್ಕ್ ಇಲ್ಲ, ಮುಂಜಾಗೃತಾ ಕ್ರಮವೂ ಇಲ್ಲ. ಇದರಿಂದ ಆತಂಕ ಎದುರಾಗಿದೆ ಎಂದು ಸ್ಥಳೀಯ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.