ಭಾರತದ ಹಾಕಿಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಮುಟ್ಟಿಸಿದ ಬಲ್ಬೀರ್ ಸಿಂಗ್ ಇನ್ನು ನೆನಪು ಮಾತ್ರ

25/05/2020

1948 ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಮೇಲಕ್ಕೇರಿಸಿದ ಬಲ್ಬೀರ್ ಸಿಂಗ್ ಸೀನಿಯರ್ ಅವರು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಸೋಮವಾರ (ಇಂದು) ಬೆಳಿಗ್ಗೆ 6:30 ಗೆ ನಿಧನರಾದರು. ಅವರಿಗೆ 96 ವರ್ಷ ಪ್ರಾಯವಾಗಿತ್ತು. ಇವರ ನಿಧನದಿಂದ, ದೇಶದ ಹಾಕಿ ಕ್ರೀಡಾಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಮುಟ್ಟಿಸಿದ್ದ ಹಿರಿ ತಲೆಮಾರಿನ ಕೊಂಡಿಯೊಂದು ಕಳಚಿಕೊಂಡಂತಾಗಿದೆ. ಇನ್ನು ಅವರು ನೆನಪು ಮಾತ್ರ.

ಭಾರತವನ್ನು ಪ್ರತಿನಿಧಿಸಿದ ಶ್ರೇಷ್ಠ ಕ್ರೀಡಾ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ‘ಹಾಕಿ ಮಾಂತ್ರಿಕ’ ಬಲ್ಬೀರ್ ಸಿಂಗ್ ಸೀನಿಯರ್ ಅವರು ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕಾಯಿಲೆ ಸೇರಿದಂತೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಬಹು ಅಂಗಾಂಗ ವೈಫಲ್ಯತೆ ಗಂಭೀರ ಸ್ಥಿತಿಗೆ ತಲುಪಿದ ಕಾರಣ ಇದೇ ತಿಂಗಳ 8ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲ ದಿನಗಳಿಂದ ಆಸ್ಪತ್ರೆಯ
ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಅವರ ದೇಹ ಸ್ಪಂದಿಸದ ಕಾರಣ ಅವರು ಕೊನೆಯುಸಿರೆಳೆದಿದ್ದಾರೆ. ಬಲ್ಬೀರ್ ಸೀನಿಯರ್ ಅವರು ಮಗಳು ಸುಷ್ಬೀರ್ ಮತ್ತು ಮೂವರು ಪುತ್ರರಾದ ಕನ್ವಾಲ್ಬೀರ್ ಸಿಂಗ್, ಕರಣ್ಬೀರ್ ಸಿಂಗ್ ಮತ್ತು ಗುರ್ಬೀರ್ ಸಿಂಗ್ ಅವರನ್ನು ಅಗಲಿದ್ದಾರೆ.

ಇನ್ನು ಮುಂದೆ ಇತಿಹಾಸ ಅವರನ್ನು ನೆನೆಯುತ್ತದೆ: ‘ಹಾಕಿ ರತ್ನ’ ಧ್ಯಾನ್ ಚಂದ್ ನಂತರದ ಹಾಕಿಯ ಮತ್ತೊಂದು ದಂತಕಥೆ ಎಂದು ಕರೆಸಿಕೊಂಡಿದ್ದರು. ದಾಖಲೆ ಎಂಬಂತೆ ಮೂರು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತ ಬಲ್ಬೀರ್ ಸಿಂಗ್ ಸೀನಿಯರ್ ಇಂದು ಬೌತಿಕವಾಗಿ ಮರೆಯಾದರೂ ದೇಶದ ಇತಿಹಾಸ ಅವರನ್ನು ಸದಾ ನೆನಪಿಸುವಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಬಾಲ್ಯದಲ್ಲೇ ಭರವಸೆಯ ಆಟಗಾರ: ಪಂಜಾಬ್ ನ ಖಲ್ಸಾ ಕಾಲೇಜಿನ ಹಾಕಿ ತಂಡದ ಆಗಿನ ತರಬೇತುದಾರರಾಗಿದ್ದ ಹರ್ಬೈಲ್ ಸಿಂಗ್ ಅವರು, ಬಲ್ಬೀರ್ ಸಿಂಗ್ ದೊಸಾಂಜ್ ಅವರ ಹಾಕಿ ಕ್ರೀಡಾ ಸಾಮರ್ಥ್ಯವನ್ನು ಪರಿಗಣಿಸಿ ಭರವಸೆಯ ಹಾಕಿ ಆಟಗಾರನಾಗಿ ಗುರುತಿಸಿದರು. ಈ ಕಾರಣಕ್ಕಾಗಿ ಲಾಹೋರ್‌ನ ಸಿಖ್ ರಾಷ್ಟ್ರೀಯ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಬಲ್ಬೀರ್ ಅವರನ್ನು ಅಮೃತಸರದ ಖಲ್ಸಾ ಕಾಲೇಜಿಗೆ ವರ್ಗಾಯಿಸಬೇಕೆಂದು ಹರ್ಬೈಲ್ ಸಿಂಗ್ ಪದೇ ಪದೇ ಒತ್ತಾಯಿಸಿದರು. ಅಂತಿಮವಾಗಿ 1942 ರಲ್ಲಿ ಖಲ್ಸಾ ಕಾಲೇಜಿಗೆ ಬಲ್ಬೀರ್ ಅವರು ವರ್ಗಾವಣೆಯನ್ನು ತೆಗೆದುಕೊಳ್ಳಲು ಅವರ ಕುಟುಂಬ ಒಪ್ಪಿಗೆ ಸೂಚಿಸಿತು.

ಖಲ್ಸಾ ಕಾಲೇಜಿನಲ್ಲಿ ಹರ್ಬೈಲ್ ಸಿಂಗ್ ಅವರ ಗರಡಿಯಲ್ಲಿ ತೀವ್ರ ತರಬೇತಿ ಮತ್ತು ಅಭ್ಯಾಸವನ್ನು ಪ್ರಾರಂಭಿಸಿದ ಬಲ್ಬೀರ್ ಸಿಂಗ್, ತಮ್ಮ ಹಾಕಿ ಕ್ರೀಡಾ ಕೌಶಲ್ಯವನ್ನು ವೃದ್ಧಿಸಿಕೊಂಡು ಹಂತಹಂತವಾಗಿ ಮೇಲೇರುತ್ತಲೇ ಬಂದರು. ಬಲ್ಬೀರ್ ಸಿಂಗ್ ವ್ಯಾಸಂಗ ಮಾಡುತ್ತಿದ್ದ ಖಲ್ಸಾ ಕಾಲೇಜಿನಲ್ಲಿ ನಾಲ್ಕು ಹಾಕಿ ಪಿಚ್‌ಗಳಿದ್ದವು. ಈ ಎಲ್ಲಾ ಮೈದಾನಗಳಲ್ಲಿಯೂ ಬಲ್ಬೀರ್ ಅವರಿಗೆ ಪ್ರತ್ಯೇಕ ತರಬೇತಿ ನೀಡಲಾಗುತ್ತಿತ್ತು. ಇವರ ಗುರುಗಳಾದ ಹರ್ಬೈಲ್ ಸಿಂಗ್ ಅವರೇ ಹೆಲ್ಸಿಂಕಿ ಮತ್ತು ಮೆಲ್ಬೋರ್ನ್ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡಕ್ಕೆ ವಿಶೇಷ ತರಬೇತಿಯನ್ನು ನೀಡಿದವರಾಗಿದ್ದಾರೆ.

ಅತ್ಯುತ್ತಮ ಸೆಂಟರ್ ಫಾರ್ವರ್ಡ್ ಆಟಗಾರರಾದ ಬಲ್ಬೀರ್ ಅವರ ಹಾಕಿ ಕೌಶಲ್ಯವನ್ನು ಗುರುತಿಸಿ 1942–43ರಲ್ಲಿ ಪಂಜಾಬ್ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲು ಅವರನ್ನು ಆಯ್ಕೆ ಮಾಡಲಾಯಿತು. ಆ ಸಮಯದಲ್ಲಿ ಅವಿಭಜಿತ ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಸಿಂಧ್ ಮತ್ತು ರಾಜಸ್ಥಾನಗಳನ್ನು ಒಳಗೊಂಡಿರುವ ದೊಡ್ಡ ಭೌಗೋಳಿಕ ಪ್ರದೇಶದ ಕಾಲೇಜುಗಳನ್ನು ಪಂಜಾಬ್ ವಿಶ್ವವಿದ್ಯಾಲಯ ಒಳಗೊಂಡಿತ್ತು. ಹೀಗೆ ಪಂಜಾಬ್ ವಿಶ್ವವಿದ್ಯಾಲಯ ಹಾಕಿ ತಂಡವು ಸತತ ಮೂರು ವರ್ಷಗಳ ಕಾಲ ಬಲ್ಬೀರ್ ಸಿಂಗ್ ಅವರ ನಾಯಕತ್ವದಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.1947 ರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿಯೂ ಬಲ್ಬೀರ್ ಸಿಂಗ್ ನಾಯಕತ್ವದ ತಂಡವೇ ಭರ್ಜರಿ ಗೆಲುವು ಸಾಧಿಸಿತ್ತು. ನಂತರ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಬಲ್ಬೀರ್ ಸಿಂಗ್ ಕುಟುಂಬ ಲೂಧಿಯಾನಕ್ಕೆ ಸ್ಥಳಾಂತರಗೊಂಡಿತು.

ಲೂಧಿಯಾನಕ್ಕೆ ಬಂದ ಬಲ್ಬೀರ್ ಸಿಂಗ್ ಅವರು ಅಲ್ಲಿ ಪಂಜಾಬ್ ಪೊಲೀಸ್ ಹಾಕಿ ತಂಡಕ್ಕೆ ಆಯ್ಕೆಗೊಂಡರು. 1941-1961ರ ಅವಧಿಯಲ್ಲಿ ಪಂಜಾಬ್ ಪೊಲೀಸ್ ತಂಡದ ನಾಯಕರಾಗಿದ್ದ ಬಲ್ಬೀರ್, ಹಲವಾರು ಪ್ರತಿಷ್ಠಿತ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು. ಇದೇ ಅವಧಿಯಲ್ಲಿ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಪಂಜಾಬ್ ರಾಜ್ಯ ಹಾಕಿ ತಂಡವನ್ನು ಪ್ರತಿನಿಧಿಸಿದ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ.

ಅಜೇಯವಾಗಿ ಉಳಿದ ವಿಶ್ವದಾಖಲೆ: ಒಲಂಪಿಕ್ಸ್ ನ ಪುರುಷರ ಹಾಕಿ ಫೈನಲ್‌ನಲ್ಲಿ ಒಬ್ಬ ವ್ಯಕ್ತಿಯು ಗಳಿಸಿದ ಅತೀ ಹೆಚ್ಚಿನ ಗೋಲುಗಳಲ್ಲಿ (ಐದು) ಅವರ ವಿಶ್ವ ದಾಖಲೆ ಇನ್ನೂ ಅಜೇಯವಾಗಿ ಉಳಿದಿದೆ. ಅವರು 1952 ರಲ್ಲಿ ಹಾಲೆಂಡ್ ವಿರುದ್ಧ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಈ ಪಂದ್ಯದಲ್ಲಿ ಭಾರತ ತಂಡವು ಅಂತಿಮವಾಗಿ 6-1 ಗೋಲುಗಳಿಂದ ಜಯಗಳಿಸಿತು.

ಅಪ್ರತಿಮ ಹಾಕಿ ಆಟಗಾರರಾಗಿ ವಿಶೇಷ ಛಾಪು ಮೂಡಿಸಿದ ಅದಮ್ಯ ತಾರೆ ಬಲ್ಬೀರ್ ಸಿಂಗ್ ದೋಸಾಂಜ್ ಅವರು, ಮೂರು ಬಾರಿ ಒಲಿಂಪಿಕ್ ಚಿನ್ನದ ಚಾಂಪಿಯನ್ ಆಗಿದ್ದರು. 1948ರಲ್ಲಿ ಲಂಡನ್ ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿದ್ದ ಇವರು, ಅದ್ಭುತ ಪ್ರದರ್ಶನದ ಮೂಲಕ ವಿಶೇಷವಾಗಿ ದೇಶದ ಗಮನ ಸೆಳೆದಿದ್ದರು. 1952ರಲ್ಲಿ ಉಪನಾಯಕರಾಗಿ ಭಾಗವಹಿಸಿದ್ದ ಹೆಲ್ಸಿಂಕಿ ಒಲಂಪಿಕ್ಸ್ ನಲ್ಲಿ ಮತ್ತು 1956ರಲ್ಲಿ ಭಾರತ ತಂಡದ ನಾಯಕರಾಗಿ ಭಾಗವಹಿಸಿದ್ದ ಮೆಲ್ಬೋರ್ನ್ ಒಲಿಂಪಿಕ್ಸ್ ನಲ್ಲಿ ಭಾರತ ವಿಜಯಪತಾಕೆ ಹರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ‘ಸಾರ್ವಕಾಲಿಕ ಶ್ರೇಷ್ಠ ಹಾಕಿ ಆಟಗಾರ’ರಲ್ಲಿ ಒಬ್ಬರೆಂದು ದೇಶ ಗುರುತಿಸಿತು.
ಬಲ್ಬೀರ್ ಸಿಂಗ್ ಎಂಬ ಇತರ ಭಾರತೀಯ ಹಾಕಿ ಆಟಗಾರರಿಂದ ಅವನನ್ನು ಪ್ರತ್ಯೇಕಿಸಲು ಅವರನ್ನು ಹೆಚ್ಚಾಗಿ ‘ಬಲ್ಬೀರ್ ಸಿಂಗ್ ಸೀನಿಯರ್’ ಎಂದು ಕರೆಯಲಾಗುತ್ತದೆ.

ಬದುಕು ರೂಪಿಸಿದ ಹಾಕಿ ಕ್ರೀಡೆ: ಸಕ್ರಿಯ ಹಾಕಿ ವೃತ್ತಿ ಜೀವನದಲ್ಲಿ ನಿವೃತ್ತಿ ಪಡೆದ ಬಲ್ಬೀರ್ ಸಿಂಗ್ ಸೀನಿಯರ್ ಅವರು, ಪಂಜಾಬ್ ರಾಜ್ಯ ಕ್ರೀಡಾ ಮಂಡಳಿಯ ಕಾರ್ಯದರ್ಶಿಯಾಗಿ ಮತ್ತು ಪಂಜಾಬ್ ಸರ್ಕಾರದಲ್ಲಿ ಕ್ರೀಡಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು.1992 ರಲ್ಲಿ ಸಿಂಗ್ ಅವರು ಈ ಕರ್ತವ್ಯದಿಂದ ನಿವೃತ್ತರಾದರು.

ಭಾರತ ಗೆದ್ದ 1975 ರ ಪುರುಷರ ಹಾಕಿ ವಿಶ್ವಕಪ್ ಮತ್ತು 1971 ರ ಪುರುಷರ ಹಾಕಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಸೀನಿಯರ್ ಸಿಂಗ್ ಅವರು, ಭಾರತೀಯ ತಂಡದ ವ್ಯವಸ್ಥಾಪಕ ಮತ್ತು ಮುಖ್ಯ ತರಬೇತುದಾರರಾಗಿದ್ದರು. ಈ ವಿಶ್ವಕಪ್ ನಲ್ಲಿ ಭಾರತ ಕಂಚಿನ ಪದಕ ಗಳಿಸಿತ್ತು.

ಪಂಜಾಬ್ ಮಣ್ಣಿನಲ್ಲಿ ಜನನ:
ಪಂಜಾಬ್ ನೆಲದ ಮಣ್ಣಿಗೂ ಭಾರತೀಯ ಸೇನೆ ಮತ್ತು ಹಾಕಿ ಕ್ರೀಡೆಗೂ ಅವಿನಾಭಾವ ನಂಟಿದೆ. ಸೈನ್ಯಕ್ಕೆ ಇದುವರೆಗೂ ಸಾವಿರಾರು ಯೋಧರನ್ನು ಮತ್ತು ಕ್ರೀಡಾಲೋಕಕ್ಕೆ ಸಾವಿರಾರು ಕ್ರೀಡಾಪಟುಗಳನ್ನು ದೇಶಕ್ಕಾಗಿ ಅರ್ಪಿಸಿದ ಮಣ್ಣು ಎಂಬ ಖ್ಯಾತಿ ಹಿಂದಿನಿಂದಲೂ ಪಂಜಾಬ್ ರಾಜ್ಯಕ್ಕಿದೆ.
ಅದೇ ಪಂಜಾಬ್ ಮಣ್ಣಿನ ಹರಿಪೂರ್ ಸಮೀಪದ ಖಾಲ್ಸ ಎಂಬಲ್ಲಿ 1923 ಡಿಸೆಂಬರ್ 31 ರಂದು ಅಂದಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿದ್ದ ದಲೀಪ್ ಸಿಂಗ್ ದೊಸಾಂಜ್ ಅವರ ಮಗನಾಗಿ ಬಲ್ಬೀರ್ ಸಿಂಗ್ ಜನಿಸಿದರು. ಲಾಹೋರ್ ಮೂಲದ ಸುಶೀಲ್ ಅವರನ್ನು 1946 ರಲ್ಲಿ ಬಲ್ಬೀರ್ ಸಿಂಗ್ ತಮ್ಮ ಬಾಳಸಂಗಾತಿಯಾಗಿಸಿಕೊಂಡು ವಿವಾಹ ಜೀವನ ಆರಂಭಿಸಿದರು.

ಮುಡಿಗೇರಿದ ಪ್ರಶಸ್ತಿಗಳು: 1956 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ನಾಯಕತ್ವ ವಹಿಸಿದ್ದ ಮತ್ತು 1975 ರ ವಿಶ್ವಕಪ್ ವಿಜೇತ ತಂಡದ ವ್ಯವಸ್ಥಾಪಕರಾಗಿದ್ದ ಬಲ್ಬೀರ್ ಸಿಂಗ್ ಅವರು,
1957 ರಲ್ಲಿ ಭಾರತದ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ ಪಡೆದ ಮೊದಲ ಹಾಕಿ ಆಟಗಾರ.

1982 ರಲ್ಲಿ ‘ಪೇಟ್ರಿಯಾಟ್’ ಪತ್ರಿಕೆ ನಡೆಸಿದ ರಾಷ್ಟ್ರೀಯ ಸಮೀಕ್ಷೆಯಲ್ಲಿ ಅವರನ್ನು ‘ಶತಮಾನದ ಭಾರತೀಯ ಕ್ರೀಡಾಪಟು’ಎಂದು ಆಯ್ಕೆ ಮಾಡಲಾಯಿತು. 2015 ರಲ್ಲಿ, ಅವರಿಗೆ ಹಾಕಿ ಭಾರತದ ದಂತಕಥೆ ‘ಮೇಜರ್ ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿತ್ತು.

ಮೇರು ತಾರೆ ಬಲ್ಬೀರ್ ಸಿಂಗ್ ಸೀನಿಯರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಬೇಕು ಎಂದು ಈ ಹಿಂದೆ ಪಂಜಾಬ್ ರಾಜ್ಯ ಸರಕಾರ ಶಿಫಾರಸು ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದನ್ನು ಇಲ್ಲಿ ಸ್ಮರಿಸಬಹುದಾಗಿದೆ

ಹುಡುಕಿ ಬಂದ ಗೌರವ: 2012 ರಲ್ಲಿ ಲಂಡನ್ ಒಲಿಂಪಿಕ್ಸ್ ಸಮಯದಲ್ಲಿ, ರಾಯಲ್ ಒಪೇರಾ ಹೌಸ್‌ನಲ್ಲಿ ನಡೆದ “ದಿ ಒಲಿಂಪಿಕ್ ಜರ್ನಿ: ದಿ ಸ್ಟೋರಿ ಆಫ್ ದಿ ಗೇಮ್ಸ್” ಎಂಬ ಒಲಿಂಪಿಕ್ ಮ್ಯೂಸಿಯಂ ಪ್ರದರ್ಶನದಲ್ಲಿ ಬಲ್ಬೀರ್ ಸಿಂಗ್ ಅವರನ್ನು ಅಭಿನಂದಿಸಲಾಯಿತು.

1956 ರ ಮೆಲ್ಬೋರ್ನ್ ಒಲಿಂಪಿಕ್ಸ್‌ನ ನೆನಪಿಗಾಗಿ ‘ಡೊಮಿನಿಕನ್ ರಿಪಬ್ಲಿಕ್’ ವತಿಯಿಂದ 1958 ರಲ್ಲಿ ಬಿಡುಗಡೆ ಮಾಡಿದ ಸ್ಟಾಂಪ್‌ನಲ್ಲಿ ಭಾರತದ ಗುರುದೇವ್ ಸಿಂಗ್ ರೊಡನೆ ಬಲ್ಬೀರ್ ಸಿಂಗ್ ಸೀನಿಯರ್ ಸ್ಥಾನ ಗಿಟ್ಟಿಸಿಕೊಂಡಿದ್ದರು.

ನವದೆಹಲಿಯಲ್ಲಿ 1982ರಲ್ಲಿ ನಡೆದ ‘ಏಷ್ಯನ್ ಕ್ರೀಡಾಕೂಟ’ದಲ್ಲಿ ಪವಿತ್ರ ಕ್ರೀಡಾ ಜ್ವಾಲೆಯನ್ನು ಬೆಳಗಿಸಿದ ಕೀರ್ತಿ ಬಲ್ಬೀರ್ ಸಿಂಗ್ ಸೀನಿಯರ್ ಅವರಿಗೆ ಸಲ್ಲುತ್ತದೆ.

ಅಪ್ಪಟ ಜಾತ್ಯತೀತವಾದಿ: 2006 ರಲ್ಲಿ ಸಿಖ್ ಸಮುದಾಯ ಸಂಘಟನೆಗಳು ಬಲ್ಬೀರ್ ಸಿಂಗ್ ಸೀನಿಯರ್ ಅವರನ್ನು ‘ಅತ್ಯುತ್ತಮ ಸಿಖ್ ಹಾಕಿ ಆಟಗಾರ’ ಎಂಬ ಮಹಾ ಮನ್ನಣೆಗೆ ಆಯ್ಕೆ ಮಾಡಿದವು. ಇದರಿಂದ ಅಸಮಾಧಾನಗೊಂಡ ಅವರು ಇದನ್ನು ಬಹಿರಂಗವಾಗಿಯೇ ತಿರಸ್ಕರಿಸಲು ಮುಂದಾದರು. ಜನತೆ ತನ್ನನ್ನು ಜಾತಿ- ಧರ್ಮಕ್ಕಿಂತ ಮಿಗಿಲಾಗಿ ಕಾಣುತ್ತಿದ್ದಾರೆ. ಯಾವುದೇ ಕ್ರೀಡೆ ಯಾವುದೇ ಜಾತಿಯ ಚೌಕಟ್ಟಿನಲ್ಲಿ ಇರಬಾರದು ಎಂದು ಪ್ರತಿಪಾದಿಸಿದರು. ಅಲ್ಲದೆ ತಾನು ಓರ್ವ ಜಾತ್ಯತೀತ ಮತ್ತು ರಾಷ್ಟ್ರೀಯವಾದಿ ಎಂದು ವಿವರಿಸಿದ್ದ ಅವರು, ಧರ್ಮ ಆಧಾರಿತ ಆಟಗಾರರ ಪಟ್ಟಿಯ ಬಗ್ಗೆ ತೀವ್ರ ಆಕ್ರೋಶರಾಗಿದ್ದರು. ಕೊನೆಗೆ ಹಿತೈಷಿಗಳು ಅವರ ಮನವೊಲಿಸಿದಾಗ ಈ ಮನ್ನಣೆಯಿಂದ ‘ಭಾರತೀಯ ಹಾಕಿ’ಗೆ ಪ್ರಚಾರ ದೊರೆಯುವುದಾದರೆ ಅದನ್ನು ಸ್ವೀಕರಿಸುತ್ತೇನೆ ಎಂದು ಒಪ್ಪಿಕೊಂಡು ಅತ್ಯುತ್ತಮ ಸಿಖ್
ಹಾಕಿ ಆಟಗಾರ ಎಂಬ ಬಿರುದನ್ನು ತಮ್ಮದಾಗಿಸಿಕೊಂಡರು.

1977 ರಲ್ಲಿ ಬಲ್ಬೀರ್ ಸಿಂಗ್ ಸೀನಿಯರ್ ರಚಿಸಿದ ತಮ್ಮ ಆತ್ಮಚರಿತ್ರೆ ‘ದಿ ಗೋಲ್ಡನ್ ಹ್ಯಾಟ್ರಿಕ್: ಮೈ ಹಾಕಿ ಡೇಸ್’ ಎಂಬ ಹೆಸರಿನ ಸ್ಪೂರ್ತಿದಾಯಕ ಕೃತಿ ಹೆಚ್ಚು ಪ್ರಸಿದ್ಧಿಯಾಗಿದೆ.

 

ವಿಶೇಷ ಲೇಖನ: ರಫೀಕ್ ತೂಚಮಕೇರಿ