ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ : ಚಿಕ್ಕಮುಂಡೂರು ಗ್ರಾಮದಲ್ಲಿ ಹಸು ಬಲಿ

ಮಡಿಕೇರಿ ಮೇ 25 : ದಕ್ಷಿಣ ಕೊಡಗಿನಲ್ಲಿ ಜಾನುವಾರಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿಯೊಂದನ್ನು ಇತ್ತೀಚೆಗೆ ಸೆರೆ ಹಿಡಿಯಲಾಗಿದ್ದರೂ, ಇದೀ ಮತ್ತೊಂದು ಹುಲಿ ದಾಳಿ ಪ್ರಕರಣ ನಡೆದಿದೆ.
ಪೊನ್ನಂಪೇಟೆ ಸಮೀಪದ ಚಿಕ್ಕಮುಂಡೂರು ಗ್ರಾಮದ ನಿವೃತ್ತ ಪೋಸ್ಟ್ ಮಾಸ್ಟರ್ ಕಳ್ಳಿಚಂಡ ಜಗದೀಶ್ (ರಘು) ಅವರಿಗೆ ಸೇರಿದ ಹಸುವನ್ನು ಸನಿಹದ ತೋಟದಲ್ಲಿ ಹುಲಿ ಕೊಂದುಹಾಕಿದೆ. ಎರಡು ದಿನದ ಹಿಂದೆಯೇ ಘಟನೆ ನಡೆದಿದ್ದು, ಸನಿಹದ ತೋಟದಲ್ಲಿ ಕಳೇಬರ ಪತ್ತೆಯಾಗಿದೆ
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮತ್ತೆ ಈ ವಿಭಾಗದಲ್ಲಿ ಜನತೆ ಆತಂಕಪಡುವಂತಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಬೆಳ್ಳೂರು ಗ್ರಾಮದಲ್ಲಿ ಹುಲಿಯೊಂದನ್ನು ಅರಣ್ಯ ಇಲಾಖೆ ಭಾರೀ ಕಾರ್ಯಾಚರಣೆ ಮೂಲಕ ಸೆರೆಹಿಡಿದಿತ್ತು. ಇದರಿಂದ ಜಾನುವಾರುಗಳನ್ನು ಕಬಳಿಸುತ್ತಿದ್ದ ವನ್ಯಮೃಗದ ಕಾಟ ತಪ್ಪಿತೆಂದು ಜನತೆ ಹಾಗೂ ಅರಣ್ಯ ಇಲಾಖೆ ನಿಟ್ಟುಸಿರು ಬಿಟ್ಟಿದ್ದರು.
ಆದರೆ ಮತ್ತೆ ಹುಲಿ ದಾಳಿ ಪ್ರಕರಣ ಮರುಕಳಿಸಿರುವ ಹಿನ್ನೆಲೆಯಲ್ಲಿ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.
ಘಟನಾ ಸ್ಥಳಕ್ಕೆ ವೀರಾಜಪೇಟೆ ಡಿಎಫ್‍ಓ ರೋಶನಿ, ತಿತಿಮತಿ ಎಸಿಎಫ್ ಶ್ರೀಪತಿ, ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಶು ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ನಾಗರಹೊಳೆಯ ವೈದ್ಯ ಮುಜೀಬ್ ಪರಿಶೀಲಿಸಿದರು.
ಕ್ಯಾಮರಾ ಅಳವಡಿಕೆ: ಜಾನುವಾರು ಮೇಲೆ ಮತ್ತೆ ಹುಲಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಅದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಇದರೊಂದಿಗೆ ಡೆಹರಾಡೂನ್‍ನ ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್‍ನ ತಜ್ಞರಾದ ಚೆಕ್ಕೆರ ತಮ್ಮಯ್ಯ ಶೌರ್ಯ, ಕಿರಿಯಮಾಡ ದಿಲನ್ ಮಂದಣ್ಣ ಅವರುಗಳ ನೇತೃತ್ವದಲ್ಲಿ ಕ್ಯಾಮರಾ ಅಳವಡಿಸಲಾಗಿದೆ. ಸನಿಹದಲ್ಲೇ ದೇವರ ಕಾಡೊಂದು ಇದ್ದು, ಹುಲಿಯ ಜಾಡು ಪತ್ತೆಯಾಗಿಲ್ಲ.
ಉಪವಲಯ ಅರಣ್ಯಾಧಿಕಾರಿ ದಯಾನಂದ ಸಂಜಿತ್, ಚೊಟ್ಟೆಯಂಡಮಾಡ ಬೋಪಣ್ಣ, ಗಣೇಶ್, ದಿವಾಕರ್, ಜಡಿಮನಿ, ಪೊನ್ನಂಪೇಟೆಯ ಆರ್‍ಆರ್‍ಟಿ ತಂಡ, ವೈಲ್ಡ್ ಲೈಫ್ ವಾರ್ಡನ್ ಕುಂಞಂಡ ಬೋಸ್ ಮಾದಪ್ಪ ಅವರುಗಳು ಕಾರ್ಯಾಚರಣೆಗೆ ಸಹಕರಿಸುತ್ತಿದ್ದಾರೆ.