ಅಕ್ರಮ ಮದ್ಯ ಸಾಗಾಟ : ಗರಗಂದೂರು ಗ್ರಾಮದಲ್ಲಿ ಮೂವರ ಬಂಧನ

ಮಡಿಕೇರಿ ಮೇ 25 : ಸುಂಟಿಕೊಪ್ಪ ಸಮೀಪದ ಗರಗಂದೂರು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ 106 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಗರಗಂದೂರು ಅಂಬೇಡ್ಕರ್ ಕಾಲೋನಿ ನಿವಾಸಿ, ಕೂಲಿ ಕಾರ್ಮಿಕ ಹೆಚ್.ಕೆ. ಲವ(32) ಮಡಿಕೇರಿಯ ಟ್ಯಾಕ್ಸಿ ಚಾಲಕ ಫ್ರಾನ್ಸಿಸ್(55) ಹಾಗೂ ಮಡಿಕೇರಿ ಕಾವೇರಿ ವೈನ್ಸ್ನ ಕ್ಯಾಶಿಯರ್, ಸುಂಟಿಕೊಪ್ಪ ನಿವಾಸಿ ಸುರೇಶ್ (42) ಎಂದು ಗುರುತಿಸಲಾಗಿದೆ.
ಕೊಡಗಿನ ಕೆಲವು ಗ್ರಾಮಗಳ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿರುವುದಾಗಿ ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನೇಕರ್ ಹಾಗೂ ಸೋಮವಾರಪೇಟೆ ಡಿವೈಎಸ್ಪಿ ಅವರುಗಳು, ಅಕ್ರಮವಾಗಿ ಮದ್ಯ ಸಾಗಾಟ ಮಾಡುವವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು.
ಅದರಂತೆ ಕುಶಾಲನಗರ ವೃತ್ತ ್ತ ನಿರೀಕ್ಷಕ ಎಂ. ಮಹೇಶ್ ಮತ್ತು ತಂಡ, ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದರು.
ಸೋಮವಾರ ಬೆಳಗ್ಗೆ ಮಡಿಕೇರಿಯ ಕಾವೇರಿ ವೈನ್ಸ್ನಿಂದ ಮದ್ಯವನ್ನು ಸುಂಟಿಕೊಪ್ಪದ ಗರಗಂದೂರು ಗ್ರಾಮದ, ಅಂಬೇಡ್ಕರ್ ಕಾಲೋನಿಗೆ ಸಾಗಿಸುತ್ತಿದ್ದ ಮಾಹಿತಿ ದೊರೆತು ದಾಳಿ ನಡೆಸಿದ ಪೊಲೀಸರು, ಕೆಎ12ಎನ್3026ರ ಮಾರುತಿ 800 ಕಾರಿನಲ್ಲಿ ಮೂರು ಜನ ಆರೋಪಿಗಳು ಸುಮಾರು 106 ಲೀಟರ್ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ವಾಹನ ಹಾಗೂ ಸುಮಾರು 42 ಸಾವಿರ ರೂ. ಮೌಲ್ಯದ ಮದ್ಯ ಸಹಿತ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್.ಡಿ.ಪಿ, ಸೋಮವಾರಪೇಟೆ ಡಿವೈಎಸ್ಪಿ ಹೆಚ್.ಎಂ.ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಹಾಗೂ ಕುಶಾಲನಗರ ವೃತ್ತ ನಿರೀಕ್ಷಕ ಎಂ. ಮಹೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಂಟಿಕೊಪ್ಪ ಪೊಲೀಸ್ ಉಪನಿರೀಕ್ಷಕ ತಿಮ್ಮಪ್ಪ, ಸಿಬ್ಬಂದಿಗಳಾದ ಪ್ರಕಾಶ್, ಸಂಪತ್ ರೈ, ಲೋಕೇಶ್, ದಯಾನಂದ, ಉಮೇಶ್, ಸಂಪತ್.ಜಿ.ಸಿ. ಅವರುಗಳು ಪಾಲ್ಗೊಂಡಿದ್ದರು.