ದಕ್ಷಿಣ ಕೊಡಗಿನ ಲಕ್ಷ್ಮಣ ತೀರ್ಥ ಬ್ಯಾರೇಜ್ ಮತ್ತು ಉತ್ತರ ಕೊಡಗಿನ ಹಾರಂಗಿ ಜಲಾಶಯ ತೆರವಾಗಬೇಕೆಂದು ಸಿ ಎನ್ ಸಿ ಒತ್ತಾಯಿಸುತ್ತಿರುವುದು ಯಾಕೆ ಗೊತ್ತಾ !!!

25/05/2020

ಮಡಿಕೇರಿ ಮೇ 25 : ದಕ್ಷಿಣ ಕೊಡಗಿನ ಲಕ್ಷ್ಮಣ ತೀರ್ಥ ಜಲರಾಕ್ಷಸ ಬ್ಯಾರೇಜ್ ಮತ್ತು ಉತ್ತರ ಕೊಡಗಿನ ಹಾರಂಗಿ ಜಲಕಂಟಕ ಜಲಾಶಯವನ್ನು ತೆರವುಗೊಳಿಸಲು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಆಗ್ರಹಿಸಿದ್ದಾರೆ.
ಎರಡು ಬೃಹತ್ ಆಣೆಕಟ್ಟೆಗಳು ಕೊಡಗಿನ ಜನತೆಗೆ ಉಪಯೋಗವಾಗುವ ಬದಲು ಜಲಕಂಟಕಗಳಾಗಿ ವಕ್ಕರಿಸಿದ್ದು ಇವುಗಳು ಕೊಡಗಿನ ಹೃದಯದ ಮೇಲೆ ಕುಳಿತಿರುವ ಆಟಂ ಬಾಂಬ್ ಆಗಿದ್ದು, ಯಾವುದೇ ಕ್ಷಣದಲ್ಲಿ ಸ್ಪೋಟಗೊಂಡು ಘನ ಘೋರ ಉತ್ಪಾತವಾಗಲಿದೆ ಎನ್ನುವುದಕ್ಕೆ ನಿದರ್ಶನವಾಗಿ 2019 ರಲ್ಲಿ ದಕ್ಷಿಣ ಕೊಡಗಿನಲ್ಲಿ ಘಟಿಸಿದ್ದ ಭೀಕರ ಜಲಪ್ರಳಯ ಹಾಗು ಉತ್ತರ ಕೊಡಗಿನಲ್ಲಿ 2018 ರಲ್ಲಿ ಘಟಿಸಿದ ಭೀಕರ ಭೂ ಕುಸಿತ ಉತ್ಪಾತ ತದನಂತರ 2019 ರಲ್ಲಿ ಘಟಿಸಿದ ಜಲಪ್ರಳಯ ನಮ್ಮ ಕಣ್ಣ ಮುಂದಿದೆ. ಕಳೆದ ಐವತ್ತು ವರ್ಷಗಳಿಂದ ಜಲಾಶಯಗಳಲ್ಲಿ ಶೇಖರಣೆಗೊಂಡಿರುವ ಹೂಳೆತ್ತುವಲ್ಲಿ ವಿಫಲವಾದ ಹಿನ್ನೆಲೆ ಈ ಎರಡು ಆಣೆಕಟ್ಟೆಗಳನ್ನು ಒಡನೆ ತೆರವುಗೊಳಿಸಬೇಕು. ಜೀವ ನದಿ ಕಾವೇರಿಯ ಎರಡು ಪ್ರಮುಖ ಉಪನದಿಗಳಾದ ಲಕ್ಷ್ಮಣ ತೀರ್ಥ ಮತ್ತು ಹಾರಂಗಿ ಇಂದು ಕೊಡಗಿನ ಜನತೆಗೆ ನಿಷ್ಪ್ರಯೋಜಕವಾಗಿ ಚೈನಾದ ದು:ಖಪೂರಿತ ನದಿ ಯಾಂಗ್-ಸಿಕಿಯಾಂಗ್ ನದಿ ಯಾವ ರೀತಿ ವರ್ಷಂಪ್ರತಿ ಪ್ರವಾಹದ ದಿಕ್ಕುಗಳನ್ನು ಬದಲಿಸುತ್ತಾ ಜಲಕಂಟಕವಾಗಿ ವಕ್ಕರಿಸಿದೆಯೋ ಅದೇ ರೀತಿ ನಿರಂತರ ಜಲ ಪ್ರಳಯ ಮತ್ತು ಜಲ ಸ್ಫೋಟದ ದಿಕ್ಕು ಮತ್ತು ಆಯಾಮಗಳನ್ನು ಬದಲಿಸುತ್ತಾ ಕೊಡವರನ್ನು ದು:ಖ ಸಾಗರದಲ್ಲಿ ಮುಳುಗಿಸಿದೆ. ಕೊಡಗು ಕರ್ನಾಟಕಕ್ಕೆ ಬಲವಂತ ಸೇರ್ಪಡೆಯಾಗಿದ್ದು, 20ನೇ ಶತಮಾನದ ಬಹು ದೊಡ್ಡ ಭೂ ರಾಜಕೀಯ ಉತ್ಪಾತವಾದರೆ ಕೊಡಗು ವಿಲೀನವಾದ  ಮೇಲೆ ಮೊದಲ ಆಕ್ರಮಣ/ಅತ್ಯಾಚಾರವೇ ಲಕ್ಷ್ಮಣ ತೀರ್ಥ ಬ್ಯಾರೇಜ್ ಮತ್ತು  ಹಾರಂಗಿ ಜಲಾಶಯ ಕಟ್ಟೆಗಳು.
ಅಣೆಕಟ್ಟೆ ಮತ್ತು ಜಲಾಶಯಗಳಿಂದಾಗಬೇಕಾದ ಜನ ಕಲ್ಯಾಣ ಯೋಜನೆ ಮತ್ತು ನಿರ್ಮಾಣದ ನಂತರ ಅದರ ನಿರ್ವಹಣೆಯ ಹೊಣೆಗಾರಿಕೆಗಾಗಿ ರೂಪಿಸಲಾದ ಅಂತರಾಷ್ಟ್ರೀಯ ನಿಬಂಧನೆ ಮತ್ತು ಮಾರ್ಗಸೂಚಿಗಳು ಈ ಕೆಳಗಿನಂತಿದೆ.
ಯಾವುದೇ ಆಣೆಕಟ್ಟೆ/ಬ್ಯಾರೇಜ್ ಮತ್ತು ಜಲಾಶಯಗಳ ನಿರ್ಮಾಣದ ಉದ್ದೇಶ:-
1. ಕುಡಿಯಲು ಮತ್ತು ಕೈಗಾರಿಕೆಗಳಿಗೆ ಸರಬರಾಜು ಮಾಡಲು
2. ನೀರಾವರಿ
3. ಜಲ ವಿದ್ಯುತ್ ಉತ್ಪಾದನೆ
4. ಆಂತರಿಕ ನೌಕಾಯಾನ
5. ನೀರು ಶೇಖರಣೆ/ಸಂಗ್ರಹ (ಭವಿಷ್ಯತ್ತಿನ ಉಪಯೋಗಕ್ಕೆ)
6. ಮನರಂಜನೆ (ರಿಕ್ರಿಯೇಷನ್)
ಒಮ್ಮೆ ಆಣೆಕಟ್ಟೆ ಕಟ್ಟಿದ ಮೇಲೆ ಅದರ ನಿರ್ವಹಣೆಯ ಹೊಣೆಗಾರಿಕೆ:-
1. ಪ್ರವಾಹ ನಿಯಂತ್ರಣ
2. ಹಿನ್ನೀರಿನ ಪ್ರವಾಹದಿಂದ ಬರುವ ಅವಶೇಷಗಳ ನಿಯಂತ್ರಣ
3. ಹೂಳೆತ್ತುವ ಕಾರ್ಯ
4. ಪುನರ್ವಸತಿ
5. ಪರಿಸರ ಮತ್ತು ಅರಣ್ಯ ಸಂಪತ್ತು
6. ಸಾಮಾಜಿಕ – ಆರ್ಥಿಕ ವಿಚಾರಗಳು
7. ಮರಳು, ಕೆಸರು, ಹೂಳು ಇತ್ಯಾದಿ
8. ಭದ್ರತೆಯ ಮಗ್ಗಲು
ಮೇಲಿನ ಎರಡು ಅಂಶಗಳಾದ ಆಣೆಕಟ್ಟೆ ನಿರ್ಮಾಣ ಉದ್ದೇಶದ ಕಲ್ಯಾಣ ಯೋಜನೆ ಮತ್ತು ಆಣೆಕಟ್ಟೆಯ ನಿರ್ವಹಣೆಯ ಹೊಣೆಗಾರಿಕೆಗಳು ನಿಬಂಧನೆಯಂತೆ ನಡೆದಲ್ಲಿ ಮಾತ್ರ ಆಣೆಕಟ್ಟೆಯ ಆಯಸ್ಸು ದೀರ್ಘ ಕಾಲ ಬಾಳಲಿದೆ.  ವಿಪರ್ಯಾಸವೆಂದರೆ  ಈ ಎರಡು ಆಣೆಕಟ್ಟೆಗಳಿಂದ ಮೇಲಿನ ಜನಪಯೋಗಿ ಜನಕಲ್ಯಾಣ ಯೋಜನೆ ಕಾರ್ಯಗತವಾಗಲಿಲ್ಲ ಮತ್ತು ಕಟ್ಟೆಯ ನಿರ್ವಹಣೆಯ ಹೊಣೆಗಾರಿಕೆ ಸಮರ್ಪಕವಾಗಿ ನಡೆಯಲಿಲ್ಲ ಈ ಎರಡು ಅಂತರರಾಷ್ಟ್ರಿಯ ಮಾನದಂಡಗಳನ್ನ ಸಂಪೂರ್ಣ ಬುಡಮೇಲು ಮಾಡಲಾಗಿದ್ದು, ಈ ಕಟ್ಟೆಗಳು ಜನವಿರೋಧಿ, ಜೀವವಿರೋಧಿ ಕಟ್ಟೆಗಳಾಗಿ ಮಾರ್ಪಟ್ಟಿದ್ದು ನಮ್ಮ ಕಣ್ಣ ಮುಂದಿದೆ. ಎರಡು ಕಟ್ಟೆಗಳ ಆಪರೇಷನ್ ಮತ್ತು ಮೇಂಟೇನೆನ್ಸ್ ಮ್ಯಾನ್ಯುವಲ್ ಸದರಿ ಅಧಿಕಾರಿಗಳ ಬಳಿ ಇದೆಯೇ ಎಂಬ ಅನುಮಾನ ಕಾಡುತ್ತಿದೆ.
ಲಕ್ಷ್ಮಣ ತೀರ್ಥ ಬ್ಯಾರೇಜ್ (ಕೊಡಗಿನ ಗಡಿ ಭಾಗದ ಹುಣಸೂರಿನ ಹನಗೋಡಿನಲ್ಲಿ ಕಟ್ಟಲಾದ ಬ್ಯಾರೇಜ್) :- ದಕ್ಷಿಣ ಕೊಡಗಿನ ಶ್ರೀಮಂಗಲ ನಾಡಿನ ಪಶ್ಚಿಮ ಘಟ್ಟಗಳ ಬ್ರಹ್ಮಗಿರಿ ಪರ್ವತ ಶ್ರೇಣಿಯ ಇರ್ಪು ಜಲಪಾತದಿಂದ ಹುಟ್ಟಿ ಧುಮುಕಿ ಲಕ್ಷ್ಮಣ ತೀರ್ಥ ನದಿಯಾಗಿ ದಕ್ಷಿಣ ಕೊಡಗಿನ ಬಹುತೇಕ ಪ್ರದೇಶಗಳ ಅಂದರೆ ಶ್ರೀಮಂಗಲ ನಾಡು, ಪೊನ್ನಂಪೇಟೆ ನಾಡು ಮತ್ತು ಬಾಳೆಲೆ ಹೋಬಳಿಯ ಮೂಲಕ ಹರಿದು ಇಕ್ಕೆಲಗಳಲ್ಲಿ ಫಲವತ್ತಾದ ನೀರಾವರಿ ಭೂಮಿ ಸೃಷ್ಟಿಯಾಗಲು ಕಾರಣೀಭೂತವಾಗಿ ಮುಂದೆ ಹನಗೋಡು ಮಾರ್ಗವಾಗಿ ಹುಣಸೂರು ಪ್ರವೇಶಿಸಿ ಕೆ.ಆರ್ ನಗರದ ಬಳಿ ಕಾವೇರಿ ನದಿಯಲ್ಲಿ ಸಂಗಮಿಸುತ್ತದೆ. 1956 ರವರೆಗೆ ಕೊಡಗು ಪ್ರತ್ಯೇಕ “ಸಿ” ರಾಜ್ಯವಾಗಿದ್ದಾಗ ದಕ್ಷಿಣ ಕೊಡಗಿನ ಲಕ್ಷ್ಮಣ ತೀರ್ಥ ನದಿ ಪಾತ್ರದ ಪ್ರದೇಶಗಳನ್ನು ಹೆಮ್ಮೆಯಿಂದ ಕೊಡಗಿನ ಭತ್ತ ಕಣಜವೆಂದು ಕರೆಯಲಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬೇರೆಯಾಗಿದೆ. ಪ್ರಾರಂಭದಲ್ಲಿ ಎಲ್ಲವೂ ಸುಂದರ – ಚಂದವೆಂಬ ನಾಣ್ನುಡಿಯಂತೆ ಆಣೆಕಟ್ಟೆಯನ್ನು ಕೊಡಗಿನ ಗಡಿ ಭಾಗದಿಂದ ಹೊರಗೆ ಹುಣಸೂರು ತಾಲೂಕಿನ ಹನಗೋಡಿನಲ್ಲಿ ಲಕ್ಷ್ಮಣ ತೀರ್ಥ ನದಿಗೆ ಅಡ್ಡಲಾಗಿ 1960 ರ ದಶಕದಲ್ಲಿ  96 ಅಡಿಗಳ ಬೃಹತ್ ಬ್ಯಾರೇಜ್ ನಿರ್ಮಾಣ ಮಾಡಿ ಕೊಡಗಿನ ಮುಖಜ ಭಾಗದ ಮ್ಯಸೂರು ಪ್ರದೇಶದ ಭೂಮಿಗಳಿಗೆ ನೀರುಣಿಸುವ ಕಾರ್ಯಕ್ರಮಕ್ಕೆ ಸರ್ಕಾರ ಮುಂದಾಯಿತು. ಆರಂಭದಲ್ಲಿ ಇದರ ದುಷ್ಪರಿಣಾಮ ಅಷ್ಟೇನು ಅರಿವಿಗೆ ಬರಲಿಲ್ಲ ಆದರೆ ಮೇಲ್ಕಂಡ ಎರಡನೇ ಅಂಶದ ಪ್ರಕಾರ ಆಣೆಕಟ್ಟೆಯ ನಿರ್ವಹಣೆಯನ್ನೇ ಮಾಡದಿದ್ದಾಗ ಮಿತಿಮೀರಿದ ಪ್ರವಾಹ ಮತ್ತು ಹೂಳು ಮಣ್ಣು ಶೇಖರಣೆಯಿಂದ ಹಂತ ಹಂತವಾಗಿ ಲಕ್ಷ್ಮಣ ತೀರ್ಥ ಹಿನ್ನೀರಿನ ಪ್ರದೇಶದಲ್ಲಿ  ವ್ಯವಸಾಯದ ಮಿತಿ ಪ್ರಮಾಣ ಕುಂಠಿತವಾಗುತ್ತಾ ಕೊನೆಗೆ ಅದು ಸಂಪೂರ್ಣ ಸ್ಥಗಿತಗೊಳ್ಳುವ ಸ್ಥಿತಿಗೆ ತಲುಪಿತ್ತು. ಅಂತು ಕೆಲವು ವರ್ಷಗಳವರೆಗೆ ಜಲ ಪ್ರವಾಹ ಸ್ಥಗಿತಗೊಂಡ ನಂತರ  ಹಿನ್ನೀರಿನ ಪ್ರಮಾಣ  ಇಳಿದ ಮೇಲೆ ಅಕಾಲಿಕವಾಗಿ ಅಂದರೆ ಮುಂಗಾರಿನಲ್ಲಿ ನಡಬೇಕಾಗಿದ್ದ ಭತ್ತದ ನಾಟಿಯನ್ನ ಅಕ್ಟೋಬರ್‍ನಲ್ಲಿ ನೆಡಲು ಶುರುಮಾಡಿದ ಪರಿಣಾಮ ಬೆಳೆಯ ಇಳುವರಿ ಕೂಡ  ಕುಸಿತಗೊಂಡು ರೈತರು ಸಂಕಷ್ಟಕ್ಕೆ ತುತ್ತಾದರು. ಇಷ್ಟು ಸಾಲದು ಎಂಬಂತೆ 20 ವರ್ಷಗಳ ಹಿಂದೆ  ಲಕ್ಷ್ಮಣ ತೀರ್ಥ ಬ್ಯಾರೇಜಿನ ಎತ್ತರವನ್ನು ಮತ್ತೆ 30 ಅಡಿಗೆ ಏರಿಸಲಾಯಿತು ಇದೀಗ ಅದರ ಒಟ್ಟು ಎತ್ತರ 126 ಅಡಿಗೆ ತಲುಪಿದೆ. ಈಗಾಗಿ ಅದರ ಹೂಳು ಮಣ್ಣು ಮತ್ತು ಜಲ ಸಂಗ್ರಹ ಮಿತಿಮೀರಿದ ಕಾರಣ ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ ಮೂರು ತಿಂಗಳು ಪ್ರಮುಖವಾಗಿ ಬಾಳೆಲೆ ಹೋಬಳಿ ಹಾಗು ಪೊನ್ನಂಪೇಟೆ ಹೋಬಳಿಗಳು ಜಲಾವೃತಗೊಂಡು ದ್ವೀಪದಂತಾಗುತ್ತದೆ. ಈ ಲಕ್ಷ್ಮಣ ತೀರ್ಥ ಬ್ಯಾರೇಜ್ ಹಿನ್ನೀರಿನ ಪ್ರದೇಶದಲ್ಲಿ ಶೇಖರಣೆಯಾದ ಹೂಳಿನ ಪ್ರಮಾಣ ಕನಿಷ್ಟ ಅಂದರೂ ಒಂದು ಲಕ್ಷ ಟನ್ ಇರಬಹುದು. ಕಳೆದ ವರ್ಷ ಅಂದರೆ ಮುಂಗಾರಿನ ಮೂರು ತಿಂಗಳು ಹಿಂದೆಂದೂ ಕಾಣದಷ್ಟು ಪ್ರವಾಹದ ಹುಚ್ಚು ಹೊಳೆ ಹರಿದು ಇಡೀ ದಕ್ಷಿಣ ಕೊಡಗೇ ಜಲಾವೃತವಾಗಿತ್ತು.
ಇದರ ನಡುವೆ ಕೇರಳಾಭಿಮುಖವಾಗಿ ಹರಿದು ಅರಬ್ಬೀ ಸಮುದ್ರ ಸೇರುವ ಬರಪೊಳೆ ನದಿಗೆ ಅಡ್ಡಲಾಗಿ ಬರಪೊಳೆ ಜಲ ವಿದ್ಯುತ್ ಯೋಜನೆ ಮತ್ತು ಕೊಂಗಣ ನೀರಾವರಿ ಯೋಜನೆಗಳನ್ನ ಬಿ.ಶೇಟ್ಟಿಗೇರಿ ಬಳಿಯಲ್ಲಿ ರೂಪಿಸುವ ಕ್ರೂರ ಚಿಂತನೆ ಕರ್ನಾಟಕದ ಆಡಳಿತಗಾರರ ಮನಸ್ಸಿನಲ್ಲಿ ಸದಾ ಉದ್ಭವಿಸುತ್ತಿದ್ದು ಅದು ಇಂದಿಗೂ ಜೀವಂತವಾಗಿದೆ. 1980 ರ ದಶಕದಲ್ಲಿ ಬರಪೊಳೆ ಜಲ ವಿದ್ಯುತ್ ಯೋಜನೆ ಪ್ರಾರಂಭಗೊಂಡಾಗ ಪ್ರಮುಖವಾಗಿ ದಿವಂಗತ ಶ್ರೀ. ಚೋಡುಮಾಡ ಸಾಧು ಪೂಣಚ್ಚ ನವರ ನೇತೃತ್ವದಲ್ಲಿ ನಡೆದ ನಿರಂತರ ಪ್ರತಿಭಟನೆಯಿಂದ ಸದರಿ ಯೋಜನೆ ಸ್ಥಗಿತಗೊಂಡರೂ ಜನರು ನಿದ್ರಾವಸ್ಥೆಗೆ  ಜಾರಿದ ಯಾವುದೇ ಕ್ಷಣದಲ್ಲಾದರೂ ಅದು ಮತ್ತೆ ಚಾಲನೆ ಪಡೆದುಕೊಳ್ಳಬಹುದು. ಅಂತೆಯೇ 2010 ರಲ್ಲಿ ಕರ್ನಾಟಕ ಸರ್ಕಾರ ಕೊಂಗಣ ಜಲ ವಿದ್ಯುತ್ ಯೋಜನೆಗೆ ಚಾಲನೆ ನೀಡಲು ವೈಮಾನಿಕ ಸರ್ವೆ ಕ್ಷಣ ನಡೆಸಿದ ಸಂದರ್ಭದಲ್ಲಿ ಸಿ.ಎನ್.ಸಿ, ಕೊಡವ ನ್ಯಾಷನಲ್ ಕೌನ್ಸಿಲ್ ಪೊನ್ನಂಪೇಟೆಯಲ್ಲಿ  ನಡೆಸಿದ ನಿರಂತರ ಪ್ರತಿಭಟನೆ ಸತ್ಯಾಗ್ರಹದ ಹಿನ್ನಲೆಯಲ್ಲಿ ಸದರಿ ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇದು ಕೊಡಗಿನ ಜನತೆಯ ಮೇಲೆ ತೂಗು ಕತ್ತಿಯಂತೆ ಆಕ್ರಮಣಕ್ಕೆ ಸದಾ ಸಿದ್ಧವಾಗಿದೆ. ಈ  ಕತ್ತಿ ಎಂದಾದರೂ ನಮ್ಮ ತಲೆಯ ಮೇಲೆ ಬೀಳದಿರದು. ಕೊಂಗಣ ಆಣೆಕಟ್ಟೆಯ ಉದ್ದೇಶ ಬಿ.ಶೆಟ್ಟಿಗೇರಿಯಲ್ಲಿ ಆಣೆಕಟ್ಟೆ ಕಟ್ಟಿ ಅಲ್ಲಿ ನೀರು ಸಂಗ್ರಹಿಸಿ ಆ ನೀರನ್ನು ಗೋಣಿಕೊಪ್ಪ-ಪೊನ್ನಂಪೇಟೆ ಮಾರ್ಗವಾಗಿ “ಫೀಡರ್ ಕ್ಯಾನಲ್” ಮೂಲಕ ಲಕ್ಷ್ಮಣ ತೀರ್ಥ ನದಿಗೆ ಹರಿಯ ಬಿಟ್ಟು (ಸುರಿದು) ಅಲ್ಲಿಂದ ಮುಂದಕ್ಕೆ ಮೈಸೂರು ಪ್ರದೇಶಕ್ಕೆ ನೀರು ಸರಬರಾಜು ಮಾಡುವ ದುರುದ್ದೇಶ ಹೊಂದಲಾಗಿದೆ. ಒಂದು ವೇಳೆ ಈ ಕೊಂಗಣ ಯೋಜನೆ ಕೈಗೆತ್ತಿಕೊಂಡು ಕಾರ್ಯ ಸಾಧುವಾದಲ್ಲಿ ಇಡೀ ದಕ್ಷಿಣ ಕೊಡಗು ಶಾಶ್ವತವಾಗಿ ಜಲಾವೃತಗೊಂಡು ದ್ವೀಪದಂತಾಗಿ ಜನ ಕೊಡಗು ಬಿಟ್ಟು ಅನ್ಯ ಪ್ರದೇಶಕ್ಕೆ ಬದುಕು ಅರಸಿ ಗುಳೆ ಹೋಗುವ ಅಪಾಯವಿದೆ.
ಹಾರಂಗಿ ಜಲಾಶಯ:- 2018 ರಲ್ಲಿ ವಾಯವ್ಯ ಕೊಡಗಿನ ಏಳು ನಾಡುಗಳಲ್ಲಿ ಘಟಿಸಿದ ಘನ ಘೋರ ಜಲಸ್ಫೋಟ ಮತ್ತು ಭೂ ಉತ್ಪಾತ ದುರಂತಕ್ಕೆ ನೇರ ಹೊಣೆ ಹಾರಂಗಿ ಜಲಾಶಯವೇ ಆಗಿದೆ. ಜನರಲ್ಲಿ ಇಂದಿಗೂ ಕೂಡ ಆ ದುರಂತದ ದುಸ್ವಪ್ನ ಜನರನ್ನು ಕಾಡುತ್ತಲೇ ಇದೆ.
 ಉತ್ತರ ಕೊಡಗಿನ ಹಾರಂಗಿಯಲ್ಲಿ 1965 ರಲ್ಲಿ ಆರಂಭಗೊಂಡ ಈ ಯೋಜನೆಯ ಹಿನ್ನೀರಿನಿಂದಾಗಿ ಸಾವಿರಾರು ಏಕ್ರೆ ಸಂಪದ್ಭರಿತವಾದ ಅರಣ್ಯ ಭೂಮಿ ಮುಳುಗಡೆಯಾಯಿತು. ವನ್ಯ ಸಂಕುಲಗಳು ನಿರ್ನಾಮಗೊಂಡವು. ಫಲವತ್ತಾದ ಅತ್ಯುತ್ತಮವಾದ ಕೃಷಿ ಭೂಮಿ ಜಲಾವೃತಗೊಂಡಿತ್ತು. ಭೂಮಿ ಕಳೆದುಕೊಂಡ ಸಂತ್ರಸ್ಥರಿಗೆ ಈ ತನಕ ಪರಿಹಾರ ಸಿಗಲಿಲ್ಲ. ವಾಯವ್ಯ ಕೊಡಗಿನ ಏಳು ನಾಡುಗಳು ಅದರಲ್ಲಿ ಮಡಿಕೇರಿ ನಗರದ ತೊರೆಯು  ಸೇರಿದಂತೆ  ಎಲ್ಲ ಕಡೆಗಳಿಂದ ಹರಿದು ಬರುವ ನದಿಗಳು,ತೊರೆಗಳು, ತೋಡುಗಳು, ಝರಿಗಳು ಮತ್ತು ಜಲಪಾತಗಳು ಹರದೂರು ಬಳಿ ಸಂಗಮಿಸಿ ಹಾರಂಗಿ ನದಿಯಾಗಿ ಪರಿವರ್ತಿತವಾಗಿ ಮುಂದುವರಿಯುತ್ತದೆ. ಈ ಏಳು ನಾಡುಗಳ ಪ್ರಮುಖ ನದಿಗಳು ಹಾರಂಗಿಗೆ ಪ್ರಮುಖ ಉಪನದಿಗಳಾದರೆ ಹಾರಂಗಿಯು ಕಾವೇರಿ ನದಿಗೆ ಪ್ರಮುಖ ಉಪನದಿಯಾಗಿದೆ. ಹಾರಂಗಿಯ ಕಟ್ಟೆಯ ನಂತರ ಮುಂದೆ ಹರಿದು ಕೊಡಗಿನ ಗಡಿ ಭಾಗದ ಕೂಡಿಗೆಯಲ್ಲಿ ಜೀವ ನದಿ ಕಾವೇರಿಯೊಂದಿಗೆ ಸಂಗಮಿಸುತ್ತದೆ.
ಹಾರಂಗಿ ಜಲಾಶಯವನ್ನು ಕಟ್ಟುವ ಮುನ್ನ ಮಡಿಕೇರಿ, (ಕೆ.ನಿಡುಗಣೆ, ಕರ್ಣಂಗೇರಿ), ಗಾಳಿಬೀಡು, ಕಾಲೂರು, ಮುಕ್ಕೋಡ್ಲು, ಪಾಲೇರಿ, ಮಕ್ಕಂದೂರು, ಸೂರ್ಲಬ್ಬಿ, ಗಡಿನಾಡು, ಮಾದಾಪುರ ಇತ್ಯಾದಿ ಏಳು ನಾಡುಗಳಲ್ಲಿ 1965 ರಲ್ಲೇ ಅಪಾಯದ ಗುರುತಿನ ಕಲ್ಲುಗಳನ್ನು ನೆಟ್ಟಿದ್ದು, ಈ ಕಲ್ಲುಗಳಲ್ಲಿನ  ಮುಸ್ಸೂಚನಾ ಬರವಣಿಗೆಯು ಈ ರೀತಿ ಇದ್ದು ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ 200 ಇಂಚು ಮಳೆ ಹಗಲು-ರಾತ್ರಿ ಸತತವಾಗಿ 10 ದಿನಗಳ ಕಾಲ ಸುರಿದರೆ ಮತ್ತು ಜಲಾಶಯದಲ್ಲಿ ಯಥೇಚ್ಛ ಪ್ರಮಾಣದ ನೀರು ಶೇಖರಣೆಯಾದಾಗ ಜಲಾಶಯ ಬಿರುಕು ಬಿಡಲಿದೆ ಅದರ ಹಿನ್ನೀರಿನ ಹೊಡೆತದಿಂದ ಜಲ ಸ್ಫೋಟವಾಗಿ ಹಾನಿ ಮಾಡಲಿದೆಯೆಂದು ವಿವರಿಸಲಾಗಿದೆ.
ಈ ಅವೈಜ್ಞಾನಿಕ ಜಲಾಶಯದ ಹೂಳನ್ನು ಕಳೆದ ಐವತ್ತು ವರ್ಷಗಳಿಂದಲೂ ತೆರವುಗೊಳಿಸದೆ ಇರುವುದು ಕೂಡ ಕಾರಣವಾಗಿದೆ. ಹಾರಂಗಿ ಜಲಾಶಯದ ಹಿನ್ನೀರಿನಿಂದಾಗಿ 1,000 ಕ್ಯೂಬಿಕ್ ಅಡಿ ಹೂಳು ಶೇಖರಣೆಯಾಗಿದೆ. ಬೇಸಿಗೆಯ ಉರಿ ಬಿಸಿಲಿಗೆ ಸಂಪೂರ್ಣ ಒಣಗಿ ಜಲಾಶಯದ ವಾಟರ್ ಬೆಡ್ ಬಿರುಕು ಬಿಟ್ಟಿರುತ್ತದೆ.  ತದನಂತರ ಒಮ್ಮೆಗೆ ಮುಂಗಾರಿನಲ್ಲಿ ಕ್ರಸ್ಟ್ ಗೇಟನ್ನು ಸಂಪೂರ್ಣ ಬಂದ್ ಮಾಡಿ ಅಲ್ಲಿ ಗರಿಷ್ಠ ಪ್ರಮಾಣದ ನೀರು ಅಂದರೆ ಶೇಖರಣಾ ಸಾಮಥ್ರ್ಯದ 8.8 ಟಿ.ಎಂ.ಸಿ ನೀರಿನಲ್ಲಿ 8.8 ಟಿ.ಎಂ.ಸಿಯನ್ನು ಸಂಗ್ರಹಿಸಿರುವಾಗ ಕಾದ ಕಬ್ಬಿಣದಂತಹ ಒಣಗಿದ ಜಲಾಶಯಕ್ಕೆ ಮಂಜುಗಡ್ಡೆಯೋಪಾದಿಯಲ್ಲಿ ಮಿತಿಮೀರಿದ ತಣ್ಣೀರು ಶೇಖರಣೆಗೊಂಡಾಗ ಅಲ್ಲಿ ಭೂಕಂಪನ ಮತ್ತು ಭೂ ಕುಸಿತ ಉಂಟಾಗಲು ಕಾರಣವಾಯಿತು. ಅದೇ ರೀತಿ ಮೇಲ್ಕಂಡ ಉಪ ನದಿಗಳಿಗೆ ನೀರು ಉತ್ಪತ್ತಿ ಮಾಡುವ ಪ್ರಮುಖ ಜಲನಾಳಗಳು ಜಲಾಶಯದ ಹಿನ್ನೀರಿನ ಹೊಡೆತದಿಂದ ಜಖಂಗೊಂಡು (ಪಂಕ್ಚರ್) ಸೀಳಿ ಹೋಗಿ ಜಲ ಸ್ಫೋಟ, ಭೂ ಸ್ಫೋಟವಾಗಲು ಕಾರಣವಾಯಿತು. ಮುಂಗಾರಿನಲ್ಲಿ ಜಲಾಶಯದ ಒಳ ಹರಿವಿನಿಂದ ಮಿತಿಮೀರಿದ ನೀರು ಶೇಖರಣೆಯಾದ ನಂತರ ಅಂದರೆ ಊರು ಕೊಳ್ಳೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಮಿತಿಮೀರಿ ನೀರು ಅಂದರೆ 8.8 ಟಿ.ಎಂ.ಸಿಗಿಂತ ಅಧಿಕ ನೀರು ಶೇಖರಣೆಯಾಗಿ ಎಲ್ಲ ದುರಂತಗಳು ಘಟಿಸಿದ ಮೇಲೆ ಅಷ್ಟೂ ನೀರನ್ನು ಒಮ್ಮೆಗೆ ಕ್ರಸ್ಟ್ ಗೇಟ್ ತೆರೆದು ಬಿಡುತ್ತಿರುವ ಕಾರಣ ಆ ನೀರು ಮುಂದೆ ಪೂರ್ವಾಭಿಮುಖವಾಗಿ ಕೆ.ಆರ್.ಎಸ್ ಕಡೆಗೆ ಹರಿಯಲು ಸಾಧ್ಯವಿಲ್ಲದೆ ಬಲವಾದ ಒತ್ತಡದಿಂದ ನೀರನ್ನು ಹಿಂದಕ್ಕೆ ತಳ್ಳುತ್ತಿರುವ ಕಾರಣ ಅದು ಕಾವೇರಿ ನದಿಯ ಹಿಂಬದಿಗೆ ಕುಶಾಲನಗರ, ಗುಡ್ಡೆಹೊಸೂರು, ವಾಲ್ನೂರು, ಸಿದ್ದಾಪುರ, ಕೊಡಂಗೇರಿ, ಬೇತ್ರಿ ಮತ್ತು ಕೊಟ್ಟಮುಡಿಯವರೆಗೆ ನುಗ್ಗಿ ಪ್ರವಾಹಕ್ಕೂ ಕೂಡ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಕೊನೆ ಪಕ್ಷ ಕ್ರಸ್ಟ್ ಗೇಟನ್ನು (ಫ್ಲಡ್ ಗೇಟ್) ಸಂಪೂರ್ಣ ಬಂದ್ ಮಾಡಿ ಚಿಕ್ಲಿ ಜಲಾಶಯದ ಮಾದರಿ ಕಟ್ಟೆಯ ಮೇಲ್ಭಾಗದಿಂದಲೇ ಒಂದು ಪಾಶ್ರ್ವವನ್ನು ತಗ್ಗಿಸಿ ಜಲಾಶಯದಲ್ಲಿ ನೀರು ಅಧಿಕವಾದಾಗ ತಾನಾಗಿಯೇ ಹೊರ ಚೆಲ್ಲುವಂತೆ ವ್ಯವಸ್ಥೆ ಮಾಡಿರೆಂದು ಕೂಡ ಸಿ.ಎನ್.ಸಿ. ಕೋರಿತ್ತು.
ಈ ಹಿನ್ನಲೆಯಲ್ಲಿ ಲಕ್ಷ್ಮಣ ತೀರ್ಥ ಮತ್ತು ಹಾರಂಗಿ ಇವೆರಡೂ ಜನರ ವ್ಯಾಪಕ ಪ್ರತಿಭಟನೆಯಿಂದ ಕಟ್ಟಲಾದ ಹಳೆ ಮೈಸೂರು ಪ್ರದೇಶದವರ ಅಕ್ರಮ ಶಿಶು. ಇದರಿಂದ ಕೊಡಗಿಗೆ ಚಿಕ್ಕಾಸು ಪ್ರಯೋಜನವಿಲ್ಲ. ಇದನ್ನು ಒಡನೆಯೇ ತೆರವುಗೊಳಿಸಬೇಕೆಂದು ಸತತವಾಗಿ  2 ವರ್ಷಗಳಿಂದ ಅಂದರೆ 2018 ರ ವಾಯವ್ಯ ಕೊಡಗಿನಲ್ಲಿ ಘಟಿಸಿದ ಜಲಸ್ಫೋಟ, ಭೂ ಸ್ಫೋಟದ ನಂತರ ಸಿ.ಎನ್.ಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಶಾಸನಬದ್ಧ ಮನವಿಗಳನ್ನು ಸಲ್ಲಿಸುತ್ತಾ ಬಂದಿತ್ತು. ಕೊಡಗಿನ ಹೃದಯದ ಮೇಲೆ ಈ ಎರಡು ಆಣೆಕಟ್ಟೆಗಳು ಆಟಂ ಬಾಂಬ್‍ನಂತೆ ಕುಳಿತಿದ್ದು, ಇದು ಯಾವುದೇ ಕ್ಷಣದಲ್ಲಿ ಸ್ಫೋಟಿಸಿ ಮಾನವ ದುರಂತಕ್ಕೆ ಎಡೆಯಾಗಬಹುದಾದ ಸಂಭವವಿದೆಯೆಂದು ಸರ್ಕಾರಕ್ಕೆ ಎಚ್ಚರಿಸಿದ್ದೆವು. ಆದರೆ ಈ ಸಂಬಂಧ ಎರಡೂ ಸರ್ಕಾರಗಳು ಪಾತಕ ಮೌನವನ್ನು ತಾಳುತ್ತಿದೆ.
1956 ರಲ್ಲಿ ಕೊಡವರ ಸಾಂಪ್ರದಾಯಿಕ ಜನ್ಮ ಭೂಮಿ ಕೊಡಗು “ಸಿ” ರಾಜ್ಯ ವಿಶಾಲ ಮೈಸೂರು ಇಂದಿನ ಕರ್ನಾಟಕದೊಂದಿಗೆ ವಿಲೀನವಾದ ನಂತರ ಒಂದಲ್ಲಾ ಒಂದು ದುರಂತಕ್ಕೆ ಬಲಿಯಾಗುತ್ತಲೇ ಬಂದಿದೆ. ಮೈಸೂರು ಪ್ರದೇಶದ ಜನರ ಉದ್ಧಾರಕ್ಕಾಗಿ ಈ ಎರಡು ಆಣೆಕಟ್ಟೆಗಳನ್ನು ಕಟ್ಟಲಾಗಿದೆ. ಕೊಡಗು ಮತ್ತು ಕೊಡವರನ್ನ ಕರ್ನಾಟಕಕ್ಕೆ ಶಾಶ್ವತ ಕಪ್ಪ ಒಪ್ಪಿಸುವ ಸಾಮಂತನಂತೆಯೂ ಮತ್ತು ಅವರ ಆಜ್ಞಾವರ್ತಿ ಎರಡನೇ ದರ್ಜೆಯ ಪ್ರಜೆಗಳಂತೆಯೂ ಕಾಣಲಾಗುತ್ತಿದೆ. ಕೊಡಗನ್ನೊಂದು ಕರ್ನಾಟಕಕ್ಕೆ  ಸಂಪತ್ತು ಸೃಷ್ಟಿಸುವ ಆಂತರಿಕ ವಸಾಹತಾಗಿ ಪರಿಗಣಿಸಲಾಗುತ್ತಿದೆ. ಪ್ರತಿಯೊಂದು ದುಸ್ಸಾಹಸಕ್ಕೂ ಕೊಡಗನ್ನು ಪ್ರಯೋಗ ಪಶುವನ್ನಾಗಿ ಬಲಿ ಕೊಡಲಾಗುತ್ತಿದೆ.
ಉದಾಹರಣೆಗೆ ತಲಕಾವೇರಿಯ ಬ್ರಹ್ಮಗಿರಿ ಪರ್ವತ ಶೃಂಗದಿಂದ ಹುಟ್ಟಿ ಭಾಗಮಂಡಲದಲ್ಲಿ ಸುಜ್ಯೋತಿ ಮತ್ತು ಕನಿಕಾ ಉಪÀದಿಗಳ  ಸಂಗಮಿಸುವುದರೊಂದಿಗೆ ಜಲಧಾರೆಯಾಗಿ ಉಕ್ಕಿ ಹರಿಯುತ್ತಾ ಕೊಡಗಿನ ಮಧ್ಯೆ ಭಾಗದಲ್ಲಿ ಹರಿದು ಇಕ್ಕೆಲೆಗಳ ಜನರ ಜಲಧಾತೆಯಾಗಿ ಹರಿಯುವ ತೀರ್ಥ ರೂಪಿಣಿ ಕಾವೇರಿ ಮುಂದೆ ಪೂರ್ವಾಭಿಮುಖವಾಗಿ ಹರಿದು ಮೈಸೂರು ಪ್ರದೇಶ ಹಾಗು ತಮಿಳುನಾಡು ಜನತೆಗೆ ಅನ್ನದಾತೆಯಾಗಿ ಹರಿದು ಮುಂದುವರೆದು ಪೂಂಫ್‍ಹಾರ್ ಬಳಿ ಬಂಗಾಳ ಕೊಲ್ಲಿಯಲ್ಲಿ ಸಂಗಮಿಸುತ್ತಾಳೆ. ಒಟ್ಟು ತಲಕಾವೇರಿಯಿಂದ ಪೂಂಫ್‍ಹಾರ್‍ವರೆಗೆ ಕಾವೇರಿ ನದಿ ನೀರಿನ ವಾರ್ಷಿಕ ಇಳುವರಿ 790 ಟಿ.ಎಂ.ಸಿ ಅಡಿ ಅದರಲ್ಲಿ 190 ಟಿ.ಎಂ.ಸಿ ಅಡಿ ನೀರು ಕೊಡಗಿನ ಇಳುವರಿಯ ಉತ್ಪಾದನೆಯಾಗಿದೆ. ಒಂದು ಟಿ.ಎಂ.ಸಿ ಎಂದರೆ 1000 ಅಡಿ ಆಳ 1000 ಅಡಿ ಅಗಲ ಮತ್ತು 1000 ಅಡಿ ಉದ್ದದಷ್ಟು ನೀರು ಶೇಖರಣೆಯ ಪ್ರಮಾಣವಾಗಿದೆ. ಕಾವೇರಿ ಜಲವಿವಾದ ಟ್ರಿಬ್ಯೂನಲ್ ಅಂತಿಮ ತೀರ್ಪು ಮತ್ತು ಸುಪ್ರೀಂಕೋರ್ಟಿನ ಅಂತಿಮ ತೀರ್ಪಿನÀ ಪ್ರಕಾರ ತಮಿಳುನಾಡಿನ ಕಾವೇರಿ ನೀರಿನ ಪಾಲು 419 ಟಿ.ಎಂ.ಸಿ ಕರ್ನಾಟಕದ ಕಾವೇರಿ ನೀರಿನ ಪಾಲು 270 ಟಿ.ಎಂ.ಸಿ + ಸುಪ್ರೀಂಕೋರ್ಟ್ ಕೊಡುಗೆ 14 ಟಿ.ಎಂ.ಸಿ, ಒಟ್ಟು 284 ಟಿ.ಎಂ.ಸಿ. ಕೇರಳದ ಕಾವೇರಿ ನೀರಿನ ಪಾಲು 30 ಟಿ.ಎಂ.ಸಿ ಮತ್ತು ಪಾಂಡಿಚೇರಿಯ ಕಾವೇರಿ ನೀರಿನ ಪಾಲು 9 ಟಿ.ಎಂ.ಸಿ. ಹೀಗೆ ಈ ನೀರಿನ ಪಾಲಿನಲ್ಲಿ ಅಂದರೆ 284 ಟಿ.ಎಂ.ಸಿ ಅಡಿ ಕರ್ನಾಟಕದ ನೀರಿನ ಪಾಲಿನಲ್ಲಿ ಕರ್ನಾಟಕದ 10 ಜಿಲ್ಲೆಗಳಿಗೆ ಸಮಾನವಾಗಿ ವಿಂಗಡಿಸಬೇಕು. ಅದರ ಪ್ರಕಾರ ಕೋಲಾರ, ಬೆಂಗಳೂರು, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗು ಕೊಡಗು. ಈ ಸಮನಾಂತರ ವಿಂಗಡಣೆಯ ಪ್ರಕಾರ 28.4 ಟಿ.ಎಂ.ಸಿಯಷ್ಟು ಕೊಡಗಿನ ಪಾಲಾಗಿದೆ. ಆದರೆ ನಮಗೆ 1 ಲೋಟ ಕುಡಿಯುವ ನೀರು ಕೂಡ ದೊರೆಯುವುದಿಲ್ಲ. ಪ್ರತೀ ವರ್ಷ “ತೊಲೆಯಾರ್” ಚಂಗ್ರಾಂದಿಯಂದು ಒಂದು ಬಾಟಲ್ ಕಾವೇರಿ ತೀರ್ಥ ದೊರೆತರೆ ಅದು ಅತ್ಯಂತ ನೆಮ್ಮದಿಯ ವಿಚಾರ. ಅದರಲ್ಲೂ ಬೆಂಗಳೂರು ಕೊಡವ ಸಮಾಜದವರು ನಮಗೆ ಇಂತಿಷ್ಟು ಬಾಟಲ್ ತೀರ್ಥ ಸಿಕ್ಕಿದೆಯೆಂದು ಸಂಭ್ರಮಿಸುತ್ತಾರೆ. ಈ ಅಲ್ಪ ತೃಪ್ತತೆಯೇ ನಮ್ಮನ್ನು ಈ ಹಕ್ಕು ವಂಚಿತ  ದುರಂತಕ್ಕೆ ಶಾಶ್ವತವಾಗಿ ತಳ್ಳಿದೆ. ನಮಗೆ ಮರ್ಯಾದೆಯಿಂದ 365 ದಿವಸ ಕುಡಿಯಲು ಮತ್ತು ನೀರಾವರಿಗೆ ಆ 28.4 ಟಿ.ಎಂ.ಸಿ ಹಕ್ಕಿನ ನೀರು ದೊರಕಬೇಕು ಅದರಲ್ಲಿ ಉಳಿದ ಹೆಚ್ಚುವರಿ ನೀರನ್ನು ಮಾರಾಟ ಮಾಡಿ ರಾಯಲ್ಟಿ (ರಾಜಧನ) ಯನ್ನು ಕೊಡಗಿನ ಅಭಿವೃದ್ಧಿಗೆ ಬಳಸಬೇಕು. ಆದರೆ 1956 ರ ನಂತರ ಕಾವೇರಿ ನದಿ ನೀರಿನ ಹಕ್ಕನ್ನು ಕೊಡಗು ಮತ್ತು ಕೊಡವರ ಪಾಲಿಗೆ ನಿರಾಕರಣೆ ಮಾಡುತ್ತಾ ಅಂತರಾಷ್ಟ್ರೀಯ ಮಾನವ ಹಕ್ಕು ನಿಬಂಧನೆಗಳನ್ನು ಸಂಪೂರ್ಣ ಬುಡಮೇಲು ಮಾಡಲಾಗಿದೆ.
ಇಂದು ನಿಜಕ್ಕೂ ಶಾಪಗ್ರಸ್ತ ಕೊರೋನಾ/ ಕೋವಿಡ್ -19 ಜಾಗತಿಕ ಮಹಾಮಾರಿ ಕೊಡಗಿನ ಪಾಲಿಗೆ  ವರದಾನವಾಗಿದೆ. ಕಾರಣ ಇಷ್ಟೇ ಪ್ರತೀ ವರ್ಷ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳುಗಳಲ್ಲಿ ಸಣ್ಣ- ಸಣ್ಣ ರೈತರು ತಮ್ಮ ಕಾಫಿ ಬೆಳೆಗೆ ಹೂ ಅರಳಲು ಅಕಾಲಿಕ ಮಳೆಯ ಹಿನ್ನಲೆಯಲ್ಲಿ ತಮ್ಮ ಪೂರ್ವಾಜಿತ ಕಾವೇರಿ ನದಿಯ ಉಪ ನದಿಗಳಾದ ತೋಡು, ಕೆರೆ, ಬಾವಿಗಳಿಂದ ನೀರು ಹಾಯಿಸುತ್ತಾರೆ. ಪ್ರತೀ ವರ್ಷ ಜಿಲ್ಲಾಡಳಿತ ಈ ರೈತರಿಗೆ ಕಿರುಕುಳ ನೀಡುತ್ತಾ ನೀವು ಎರಡನೇ ದರ್ಜೆಯ ನಾಗರೀಕರಾಗಿರುವ ಕಾರಣ ಈ ನೀರನ್ನು ನೀರಾವರಿಗೆ ಬಳಸ ಕೂಡದು ಇದೆಲ್ಲವೂ ಮೈಸೂರು ಪ್ರದೇಶಕ್ಕೆ ಸರಬರಾಜತಕ್ಕದ್ದು ನೀವು ನೀರನ್ನು ಬಳಸುತ್ತಿದ್ದರೆ ಅವರಿಗೆ ನೀರಿನ ಕೊರತೆಯುಂಟಾಗಲಿದೆ. ನಮ್ಮ ಆದೇಶ ಮೀರಿ ವರ್ತಿಸಿದರೆ ನಿಮ್ಮ ಮೇಲೆ ಮೊಕದ್ದಮ್ಮೆ ಹೂಡಲಾಗುವುದೆಂದು ಬೆದರಿಸುವ ಕಾಯಕ ವರ್ಷಂಪ್ರತಿ ಮುಂದುವರೆಯುತ್ತಿದ್ದು, (ಯಾರಾದರೂ ಕಾಫಿ ಬೆಳೆಗೆ ಹನಿ ನೀರಾವರಿ/ ಸ್ಫಿಂಕ್ಲರ್ ಇರಿಗೇಷನ್ ಮಾಡುತ್ತಿದ್ದಾರೆಯೇ ಅದನ್ನು ಪರಿಶೀಲಿಸಿ ಬನ್ನಿರೆಂದು ಜಿಲ್ಲಾಡಳಿತ ಗ್ರಾಮ ಲೆಕ್ಕಿಗರಿಗೆ ಸೂಚಿಸಿದರೆ ಆ ಗ್ರಾಮ ಲೆಕ್ಕಿಗ ಪರಿಶೀಲಿಸಿ ವರದಿ ನೀಡುವ ಬದಲು ಬಳಕೆದಾರರನ್ನು ಬೆದರಿಸಿ ನಿಮ್ಮ ಇಂಜಿನ್ ಸೀಜ್ ಮಾಡಲು ಜಿಲ್ಲಾಡಳಿತ ಹೇಳಿದೆಯೆಂದು ನನಗೆ ರೂ.5,000/- ಕೊಟ್ಟರೆ ನೀವು ಬಚಾವಾಗಬಹುದೆಂದು ದಂಧೆ ಮಾಡುವುದು ಮಾಮೂಲಾಗಿದೆ) ಸಿ.ಎನ್.ಸಿ ಮಧ್ಯೆ ಪ್ರವೇಶಿಸಿ ವಿಶ್ವ ಸಂಸ್ಥೆಯ ಅಂತರಾಷ್ಟ್ರಿಯ ಜಲ ವಿವಾದ ನ್ಯಾಯ ಮಂಡಳಿಯಿಂದ ಹಿಡಿದು ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದವರೆಗೆ ಪತ್ರ ಬರೆದು ನಮ್ಮ ಪಾಲಿನ ನೀರಿನ ಹಕ್ಕನ್ನು ಸಮರ್ಥಿಸಿದ ಮೇಲೆ ಆ ಕೀಟಲೆ ಸ್ಥಗಿತವಾಗುತ್ತದೆ. ಈ ಹಾವಳಿ ಅದಕ್ಕೆ ಪ್ರತಿಯಾಗಿ ನಮ್ಮ ಹಕ್ಕಿನ ಪ್ರತಿಪಾದನೆ ಪ್ರತಿ ವರ್ಷವೂ ನಡೆಯುತ್ತಾ ಬಂದಿದೆ. ಆದರೆ ಈ ವರ್ಷ ಕೋವಿಡ್-19 ಪ್ಯಾಂಡಮಿಕ್ ನಿಂದಾಗಿ ಜಿಲ್ಲಾಡಳಿತ ಉನ್ನತ ಮಟ್ಟದ ಅಧಿಕಾರಿಗಳಿಂದ ಹಿಡಿದು ಗ್ರಾಮ ಲೆಕ್ಕಿಗರವರೆಗೆ ಈ ಮಹಾಮಾರಿ ವ್ಯಾಧಿ ನಿಯಂತ್ರಣಕ್ಕೆ ಹಗಲಿರುಳು ಒಂದು ತಪಸ್ಸಿನಂತೆ ತಮ್ಮನ್ನು ತೊಡಗಿಸಿಕೊಂಡ ಹಿನ್ನಲೆಯಲ್ಲಿ ನೀರಾವರಿ ವಿಷಯದಲ್ಲಿ ಜನರಿಗೆ ಕೀಟಲೆ ಮತ್ತು ಕ್ಯಾತೆ ಮಾಡಲು ಸಮಯಾವಕಾಶ ದೊರೆಯದ ಕಾರಣ ಕೊಡಗಿನ ಕಾವೇರಿ ನದಿ ನೀರಿನ ಬಳಕೆದಾರರು ಈ ಮೂರು ತಿಂಗಳು ನಿರಾತಂಕವಾಗಿ ನೀರು ಬಳಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು ಎಂಬುದು ನೆಮ್ಮದಿಯ ವಿಚಾರ.
ವಾಯವ್ಯ ಕೊಡಗಿನ ಏಳು ನಾಡುಗಳಲ್ಲಿ ಶಾಶ್ವತ ಆಪತ್ತು ನಿರ್ವಹಣಾ ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ಆಗ್ರಹ:- 2018 ರಲ್ಲಿ ಹಾರಂಗಿ ಜಲಾಶಯದ ಹಿನ್ನೀರಿನ ಪ್ರದೇಶಗಳಾದ ವಾಯವ್ಯ ಕೊಡಗಿನ ಏಳು ನಾಡುಗಳಲ್ಲಿ ಘಟಿಸಿದ ಜಲಸ್ಫೋಟ-ಭೂ ಸ್ಫೋಟ ಉತ್ಪಾತ ದುರಂತದಲ್ಲಿ ಬದುಕು ಕಳೆದುಕೊಂಡವರ ಹೆಸರಿನಲ್ಲಿ ಮನೆ ಮುರುಕರು, ರಾಜಕೀಯ ದಗಲ್ಭಾಜಿ ಮಧ್ಯವರ್ತಿಗಳು, ದುರುಳ ಕಂಟ್ರಾಕ್ಟರ್‍ಗಳು, ಭ್ರಷ್ಟ ಅಧಿಕಾರಿಗಳು, ಬುದ್ಧಿ ಜೀವಿಗಳು, ರಾಜಕೀಯ ಅಲೆಮಾರಿಗಳು, ಬೆಂದ ಮನೆಯಲ್ಲಿ ಚಳಿ ಕಾಯ್ದು ಕೊಂಡರೆ ದೊಡ್ಡ –ದೊಡ್ಡ ಕಂಪೆನಿ ಎಸ್ಟೇಟ್‍ಗಳಲ್ಲಿ ಕಾರ್ಮಿಕರಾಗಿ ಬಂದ ದೇಶ ದ್ರೋಹಿ ರೋಹಿಂಗ್ಯಗಳು ಮತ್ತು ಬಾಂಗ್ಲದೇಶಿ ವಲಸೆ ಕೋರರು ಸಂತ್ರಸ್ಥರ ಹೆಸರಿನಲ್ಲಿ ಆಶ್ರಯ ಪಡೆದು ಪರಿಹಾರ ದೋಚಿಕೊಂಡರು. ಭೂ ಕುಸಿತ ದುರಂತ ನಡೆದ ಪ್ರದೇಶದಿಂದ 60-70 ಕಿ.ಮೀ ದೂರದ ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ ಮತ್ತು ವಿರಾಜಪೇಟೆ ಮುಂತಾದೆಡೆ ಪುನರ್ವಸತಿ ಸಾಂತ್ವನ ಕೇಂದ್ರಗಳನ್ನು ತೆರೆದ ಕಾರಣ ಇವರೆಲ್ಲಾ ದುರ್ಲಾಭ ಪಡೆದು ಕೊಂಡರು ಆದರೆ ನೈಜ ಸಂತ್ರಸ್ಥರು ಬೀದಿ ಪಾಲಾದರು. ಆದ್ದರಿಂದ ಒಡನೆಯೇ ಆ ಏಳು ನಾಡುಗಳಲ್ಲಿ ಹಿಂದೆ ತಮಿಳುನಾಡು ಕರಾವಳಿ ಜಿಲ್ಲೆಗಳಲ್ಲಿ ಸುನಾಮಿ ಘಟಿಸಿದಾಗ ಮುಂದೆ ದುರಂತ ಕಾಡಿದರೆ ಒಡನೆ ಆಶ್ರಯ ಪಡೆಯಲು ಶಾಶ್ವತವಾದ ಪುನರ್ವಸತಿ ಕೇಂದ್ರಗಳನ್ನು ತಮಿಳುನಾಡಿನ ಬಂಗಾಳಕೊಲ್ಲಿ ಸಮುದ್ರ ತೀರದಲ್ಲಿ ಸ್ಥಾಪಿಸಲಾಯಿತು. ಅದೇ ತೆರನಾದ ಶಾಶ್ವತವಾದ ಧೀರ್ಘ ಬಾಳಲಿರುವ ಗಟ್ಟಿಮುಟ್ಟಾದ ಆಪತ್ತು ನಿರ್ವಹಣಾ ಪುನರ್ವಸತಿ ಕೇಂದ್ರಗಳನ್ನು 2018 ರಲ್ಲಿ ಘಟಿಸಿದ ಜಲಸ್ಫೋಟ-ಭೂಸ್ಪೋಟ ಪ್ರದೇಶಗಳಾದ ಏಳು ನಾಡುಗಳ ಪ್ರತೀ ಗ್ರಾಮಗಳಲ್ಲಿ ಸ್ಥಾಪಿಸಬೇಕೆಂದು ಸಿ.ಎನ್.ಸಿ ಆಗ್ರಹಿಸುತ್ತಲೇ ಬಂದಿದೆ ಮತ್ತೆ ಪುನರಪಿ ಆಗ್ರಹಿಸುತ್ತದೆ.
ಒಟ್ಟಾರೆ ಈ ಎಲ್ಲಾ ಹಿನ್ನಲೆಯಲ್ಲಿ ಇನ್ನೇನು ಮುಂಗಾರು ಸದ್ಯದಲ್ಲಿ ಪ್ರವೇಶಿಸಲಿದೆ. ಜೂನ್ ಮೊದಲ ವಾರದಲ್ಲಿ ನೈರುತ್ಯ ಮಾರುತ ಪ್ರಭಲವಾಗಿ ಬೀಸಿ ಭಾರಿ ರಣಮಳೆ ಸುರಿಯಲಿದೆಯೆಂದು ಹವಮಾನ ತಜ್ಞರು ವರದಿ ಮಾಡುತ್ತಿದ್ದಾರೆ. ಮುಂದೆ ಕೊಡಗಿನಲ್ಲಿ ಹಾರಂಗಿ ಹಿನ್ನೀರು ಪ್ರದೇಶದ ಏಳು ನಾಡುಗಳಲ್ಲಿ ಜಲ ಸ್ಫೋಟ-ಭೂ ಸ್ಫೋಟವಾಗಲಾರದೆಂದು ನಾವು ಶಕುನ ನುಡಿಯುವಂತಿಲ್ಲ. ಅಂತೆಯೇ ಲಕ್ಷ್ಮಣ ತೀರ್ಥ ಹಿನ್ನೀರು ಪ್ರದೇಶದಲ್ಲಿ ಜಲ ಪ್ರಳಯವಾಗುವುದಿಲ್ಲವೆಂದು ಯಾವ ಖಾತರಿಯು ನೀಡಲಾಗದು. ಆದ್ದರಿಂದ ಜನ ಸಾವಿರಾರು ವರ್ಷಗಳಿಂದ ಬಾಳಿ ಬದುಕಿದ ತಮ್ಮ ನೆಲೆಯನ್ನ ಪ್ರವಾಹ ಮತ್ತು ಜಲಸ್ಫೋಟ ದುರಂತದ ಮುನ್ಸೂಚನೆ ಅನ್ವಯ ಬಿಟ್ಟು ಬೇರೆಡೆಗೆ ತೊಲಗಬೇಕೆಂದು ಸರ್ಕಾರ ಉಪದೇಶ ಮಾಡುವ ಬದಲು ಅದಕ್ಕೆ ಮೂಲ ಕಾರಣವಾದ ಈ ಘನ ಘೋರ ದುರಂತಗಳನ್ನು ಆಹ್ವಾನಿಸುತ್ತಿರುವ ಮೇಲ್ಕಂಡ ಎರಡು ಜಲ ಕಂಟಕ ಕಟ್ಟೆಗಳಾದ ದಕ್ಷಿಣ ಕೊಡಗಿನ ಲಕ್ಷ್ಮಣ ತೀರ್ಥ ಬ್ಯಾರೇಜ್ ಮತ್ತು ಉತ್ತರ ಕೊಡಗಿನ ಹಾರಂಗಿ ಜಲಾಶಯವನ್ನ ತುರ್ತಾಗಿ ತೆರವು ಮಾಡಬೇಕೆಂದು ಸಿ.ಎನ್.ಸಿ ಮಾನವೀಯ ಹಕ್ಕೂತ್ತಾಯ ಮತ್ತು ಶಾಸನ ಬದ್ಧವಾದಂತಹ ಪುರ್ನಜ್ಞಾಪನಾ ಪತ್ರವನ್ನ ಈ ಸಂಬಂಧ ಭಾರತದ ರಾಷ್ಟ್ರಪತಿಗಳು, ಉಪ ರಾಷ್ಟ್ರಪತಿಗಳು,  ಪ್ರಧಾನ ಮಂತ್ರಿಗಳು, ಭಾರತದ ಸರ್ವೋಚ್ಚ ನ್ಯಾಯಾಲಯದ ಶ್ರೇಷ್ಠ ನ್ಯಾಯ ಮೂರ್ತಿಗಳು, ಭಾರತ ಸರ್ಕಾರದ ಗೃಹ ಮಂತ್ರಿಗಳು, ಭಾರತ ಸರ್ಕಾರದ ಜಲಸಂಪನ್ಮೂಲ ಮಂತ್ರಿಗಳು, ಕರ್ನಾಟಕದ ಮುಖ್ಯ ಮಂತ್ರಿಗಳು, ಕರ್ನಾಟಕದ ಜಲಸಂಪನ್ಮೂಲ ಮಂತ್ರಿಗಳು, ಹೇಗ್‍ನಲ್ಲಿರುವ ವಿಶ್ವ ಸಂಸ್ಥೆಯ ಅಂತರಾಷ್ಟ್ರೀಯ ಜಲ ವಿವಾದ ನ್ಯಾಯ ಮಂಡಳಿ, ವಿಶ್ವ ಸಂಸ್ಥೆಯ ಮಾನವ ಅಧಿಕಾರ ಆಯೋಗದ ಹೈ ಕಮೀಷನರ್, ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ ಮತ್ತು ಯುನೆಸ್ಕೋದ ನಿರ್ದೇಶಕರುಗಳಿಗೆ ರವಾನಿಸಲಾಗಿದೆ.
ವಿಷಯ ಸೂಚಿ:- ಕೊಡವ ಲ್ಯಾಂಡ್ ಜಿಯೋ ಪಾಲಿಟಿಕಲ್ ಅಟೋನಮಿ ಮತ್ತು ಕೊಡವ ಬುಡಕಟ್ಟು ಕುಲಕ್ಕೆ ಎಸ್.ಟಿ ಟ್ಯಾಗ್ ದೊರೆತಾಗ ಮಾತ್ರ ನಾವು ನೆಮ್ಮದಿಯಿಂದ ಈ ಲೋಪಾಮುದ್ರೆಯ ಪವಿತ್ರ ನೆಲದಲ್ಲಿ ಶಾಶ್ವತವಾಗಿ ಬಾಳಲು ಸಾಧ್ಯ ಎಂದು ಸಿ ಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟಿದ್ದಾರೆ.