ಮೂವರು ಯುವಕರು ಕೆರೆಪಾಲು

26/05/2020

ಚಿಕ್ಕಬಳ್ಳಾಪುರ ಮೇ 25 : ಕೊರೊನಾ ಲಾಕ್‍ಡೌನ್ ಸಡಿಲಿಕೆಯ ಬಳಿಕ ಬೆಂಗಳೂರಿನಿಂದ ಲಾಂಗ್ ಡ್ರೈವ್ ಬಂದ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತಿಪ್ಪಗಾನಹಳ್ಳಿ ಕೆರೆಯಲ್ಲಿ ನಡೆದಿದೆ.
ಬೆಂಗಳೂರಿನ ರಾಮಮೂರ್ತಿನಗರದ ಚಂದ್ರು(20), ರಾಜು(19) ಹಾಗೂ ನವೀನ್ (24) ಮೃತ ದುರ್ದೈವಿಗಳು. ರಾಮಮೂರ್ತಿ ನಗರದಿಂದ ನಾಲ್ಕು ಬೈಕ್‍ಗಳ ಮೂಲಕ ನಾಲ್ವರು ಯುವಕರು ಹಾಗೂ ನಾಲ್ವರು ಯುವತಿಯರು ಲಾಂಗ್ ಡ್ರೈವ್ ಬಂದಿದ್ದರು. ನವೀನ್ ಕುಮಾರ್ ಹುಟ್ಟು ಹಬ್ಬದ ಹಿನ್ನೆಲೆ ಯುವಕ, ಯುವತಿಯರು ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ದೇವಾಲಯದ ಬಾಗಿಲು ಮುಚ್ಚಿದ್ದರಿಂದ ಹೊರಗೆ ನಿಂತು ಕೈ ಮುಗಿದು ತದನಂತರ ಕೆರೆ ಬಳಿ ಬಂದಿದ್ದರು. ಈ ವೇಳೆ ಈಜಲು ಹೋದ ಮೂವರು ಕೆರೆಯ ಪಾಲಾಗಿದ್ದಾರೆ.
ಈ ಸಂಬಂಧ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.