ಜೂ.7 ರಂದು ಡಿಕೆಶಿ ಪದಗ್ರಹಣ : 6,500 ಪ್ರದೇಶಗಳಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ

ಮಡಿಕೇರಿ ಮೇ 26 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್ ಅವರು, ಜೂ.7 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪದಗ್ರಹಣ ಮಾಡಲಿದ್ದಾರೆ. ಇದೇ ಸಂದರ್ಭ ಏಕ ಕಾಲದಲ್ಲಿ ರಾಜ್ಯದ ಸುಮಾರು 6,500 ಪ್ರದೇಶಗಳಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಕ್ಷ ಸಂಘಟನೆಯ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ವೀಕ್ಷಕ ಟಿ.ಎಂ.ಶಾಹಿದ್ ತೆಕ್ಕಿಲ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಆಹ್ವಾನಿತ ಇನ್ನೂರು ಮಂದಿಗಷ್ಟೆ ಸೀಮಿತವಾಗಿ ಸರಳವಾಗಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದರು. ರಾಜ್ಯದ ಪ್ರತೀ ಗ್ರಾ.ಪಂ. ಯ ಒಂದು ಪ್ರದೇಶ, ಪ.ಪಂ. ಮೂರು, ನಗರಸಭೆ ಮತ್ತು ಪುರಸಭಾ ವ್ಯಾಪ್ತಿ ಐದು ಹಾಗೂ ಕಾರ್ಪೋರೇಷನ್ ಭಾಗದಲ್ಲಿ ಹತ್ತು ಪ್ರದೇಶಗಳಲ್ಲಿ ತಲಾ ನೂರು ಮಂದಿಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ತಿಳಿಸಿದರು.
ಈ ವಿಶಿಷ್ಟ ರೀತಿಯ ಕಾರ್ಯಕ್ರಮ ದೇಶದ ಗಮನ ಸೆಳೆಯಲಿದ್ದು, ಝೂಮ್ ಟಿವಿ ಮತ್ತು ಆ್ಯಪ್ ಮೂಲಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಾವಿರುವ ಪ್ರದೇಶದಲ್ಲೇ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ದೃಶ್ಯ ಮಾಧ್ಯಮಗಳು ನೇರ ಪ್ರಸಾರ ಮಾಡುವುದರಿಂದ ಕೋಟ್ಯಾಂತರ ಜನರು ಪದಗ್ರಹಣವನ್ನು ವೀಕ್ಷಿಸಲಿದ್ದಾರೆ ಎಂದು ಶಾಹಿದ್ ಮಾಹಿತಿ ನೀಡಿದರು.
ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಹಿನ್ನೆಲೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಅವರು ಮೇ 27 ರಿಂದ ಜೂ. 1ರ ವರೆಗೆ ಮೈಸೂರು ವಿಭಾಗದಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಮೇ 27 ರಂದು ಬೆಳಗ್ಗೆ ಮಂಡ್ಯ ಡಿಸಿಸಿ ಕಚೇರಿ, ಮಧ್ಯಾಹ್ನದ ನಂತರ ಚಾಮರಾಜನಗರ ಡಿಸಿಸಿ ಕಚೇರಿ, ಮೇ 28 ರಂದು ಬೆಳಗ್ಗೆ ಮೈಸೂರು ನಗರ ಮತ್ತು ಗ್ರಾಮಾಂತರ ಕಾರ್ಯಕರ್ತರ ಸಭೆಯಲ್ಲಿ ಡಿಸಿಸಿ ಕಚೇರಿಯಲ್ಲಿ ಪಾಲ್ಗೊಳ್ಳಲಿದ್ದು, ಮಧ್ಯಾಹ್ನದ ನಂತರ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಹಾಜರಿದ್ದು ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ.
ಮೇ 29 ರಂದು ಬೆಳಗ್ಗೆ ದಕ್ಷಿಣ ಕನ್ನಡ ಡಿಸಿಸಿ ಕಚೇರಿ, ಮಧ್ಯಾಹ್ನದ ನಂತರ ಉಡುಪಿ ಡಿಸಿಸಿ ಕಚೇರಿ, ಮೇ 30 ರಂದು ಬೆಳಗ್ಗೆ ಶಿವಮೊಗ್ಗ ಡಿಸಿಸಿ ಕಚೇರಿ, ಮಧ್ಯಾಹ್ನದ ನಂತರ ಚಿಕ್ಕಮಗಳೂರು ಡಿಸಿಸಿ ಕಚೇರಿ ಮತ್ತು ಜೂ.1 ರಂದು ಹಾಸನ ಡಿಸಿಸಿ ಕಚೇರಿಯಲ್ಲಿ ನಡೆಯುವ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಸಲೀಂ ಅಹ್ಮದ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಶಾಹಿದ್ ತಿಳಿಸಿದರು.
ರಾಜ್ಯಾದ್ಯಂತ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಏಕಕಾಲದಲ್ಲಿ ನಡೆಸುವ ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಮುಖ ಅಂಶಗಳನ್ನು ಒದಲಾಗುವುದು. ಇದೊಂದು ಮಾದರಿ ಕಾರ್ಯಕ್ರಮವಾಗಲಿದ್ದು, ಸುಮಾರು 50 ಲಕ್ಷ ಮಂದಿ ಸ್ವಯಂ ಇಚ್ಛೆಯಿಂದ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.
ರಾಜ್ಯದ 462 ಬ್ಲಾಕ್ಗಳಿಗೆ ಕೆಪಿಸಿಸಿ ವೀಕ್ಷಕರು ಆಗಮಿಸಿ ಪದಗ್ರಹಣ ಕಾರ್ಯಕ್ರಮದ ಕುರಿತು ಮೇಲುಸ್ತುವಾರಿ ವಹಿಸಲಿದ್ದಾರೆ ಎಂದು ತಿಳಿಸಿದರು. ಈ ನಡುವೆ ಪಕ್ಷದ ಎಲ್ಲಾ ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಉಸ್ತುವಾರಿಗಳ ಕಾರ್ಯಕ್ಷಮತೆಯನ್ನು ಮನದಟ್ಟು ಮಾಡಿಕೊಳ್ಳಲು ವಿಶೇಷ ತಂಡವನ್ನು ರಚಿಸಲಾಗಿದ್ದು, ಕಾಲ ಕಾಲಕ್ಕೆ ಕೆಪಿಸಿಸಿಗೆ ವರದಿಯನ್ನು ನೀಡಲಿದೆ ಎಂದು ತಿಳಿಸಿದರು.
ಬೂತ್ ಮಟ್ಟದಿಂದಲೇ ಪಕ್ಷ ಸಂಘಟನೆ ಮಾಡಲು ಎಲ್ಲರೂ ಕಣಕ್ಕಿಳಿದಿದ್ದು, ಸಾಮಾಜಿಕ ನ್ಯಾಯದ ಮೂಲಕ ಕೋಮುವಾದಿಗಳನ್ನು ಸೋಲಿಸಲು ಶ್ರಮಿಸಲಾಗುವುದೆಂದು ಶಾಹಿದ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಸಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ಡಿಸಿಸಿ ಪ್ರಮುಖರಾದ ಕೆ.ಆರ್.ಚಂದ್ರ ಹಾಗೂ ಸಿ.ಎಲ್.ಗೀತಾ ಉಪಸ್ಥಿತರಿದ್ದರು.